ನವದೆಹಲಿ: ಶ್ರದ್ಧಾ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಫ್ತಾಬ್ ಅಮೀನ್ ಪೂನಾವಲ್ಲಾನನ್ನು ಪೊಲೀಸರು ತನಿಖೆಗಾಗಿ ನವದೆಹಲಿ ಸುತ್ತಮುತ್ತಲಿನ ಕಾಡಿಗೆ ಕರೆದೊಯ್ದಿದ್ದಾರೆ. ಶ್ರದ್ಧಾ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದ ವಿವಿಧೆಡೆ ಅಫ್ತಾಬ್ ಎಸೆದಿದ್ದ. ಈ ಬಗ್ಗೆ ಪೊಲೀಸರು ಗಂಭೀರ ತನಿಖೆ ನಡೆಸುತ್ತಿದ್ದು, ಆತನನ್ನು ಮೆಹ್ರೌಲಿ ಠಾಣೆಯಿಂದ ಘಟನಾ ಸ್ಥಳಕ್ಕೆ ಕರೆತಂದು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.
ಶ್ರದ್ಧಾ ಅವರನ್ನು ಹತ್ಯೆ ಮಾಡಿದ ನಂತರ ಅಫ್ತಾಬ್ ರಕ್ತದ ಕಲೆಗಳನ್ನು ಸ್ವಚ್ಛಗೊಳಿಸುವ ವಿಧಾನಗಳ ಬಗ್ಗೆ ಮತ್ತು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಗೂಗಲ್‌ನಲ್ಲಿ ಸಾಕಷ್ಟು ವಿಚಾರಗಳನ್ನು ಸರ್ಚ್ ಮಾಡಿದ್ದಾನೆ. ಆರೋಪಿಯ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳನ್ನು ವಶಪಡಿಸಿಕೊಂಡಿದ್ದು, ಸಂಪೂರ್ಣವಾಗಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಹಿನ್ನೆಲೆ: ಅಫ್ತಾಬ್ ಎಂಬ ದುರುಳ ಮುಂಬೈನ ಕಾಲ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರದ್ಧಾ ವಾಕರ್ ಎಂಬಾಕೆಯನ್ನು ಮದುವೆಯ ನೆಪದಲ್ಲಿ ಪ್ರೀತಿಸಿ, ದೆಹಲಿಗೆ ಕರೆತಂದಿದ್ದ. ಶ್ರದ್ಧಾ ಮದುವೆಗೆ ಒತ್ತಾಯಿಸಿದಾಗ ಆಕೆಯನ್ನು ನಿರ್ದಯವಾಗಿ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದಾನೆ. ಅಷ್ಟೇ ಅಲ್ಲ, ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ರಾಜಧಾನಿ ವಿವಿಧೆಡೆ ಎಸೆದಿರುವುದು ವಿಚಾರಣೆಯ ವೇಳೆ ತಿಳಿದುಬಂದಿದೆ. ಶನಿವಾರ ಸಿಸಿಟಿವಿ ಮೂಲಕ ಅಫ್ತಾಬ್ನನ್ನು ಪೊಲೀಸರು ಪತ್ತೆ ಮಾಡಿದ್ದರು. ಈ ಸಂದರ್ಭದಲ್ಲಿ ಅಫ್ತಾಬ್ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ: ಪ್ರೇಮಿಯನ್ನು ನಂಬಿ ಪೋಷಕರನ್ನು ಬಿಟ್ಟು ಬಂದ ಯುವತಿ.. ತುಂಡಾಗಿ ಕತ್ತರಿಸಿ ಬೀದಿಗಳಲ್ಲಿ ಎಸೆದ ಪ್ರಿಯಕರ!