ತಿರುಪೂರ್ (ತಮಿಳುನಾಡು): 37 ವರ್ಷದ ವ್ಯಕ್ತಿಯೋರ್ವ ತಂದೆಗೆ ದೂರವಾಣಿ ಕರೆ ಮಾಡಿ, ತದನಂತರ ಫೇಸ್ಬುಕ್ ಲೈವ್ ಮೂಲಕವೇ ಆತ್ಮಹತ್ಯೆಗೆ ಶರಣಾಗಿರುವ ವಿಚಿತ್ರ ಘಟನೆ ತಮಿಳುನಾಡಿನ ತಿರುಪೂರ್ದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ವ್ಯಕ್ತಿಯ ಹೆಸರು ರಾಮಕುಮಾರ್. ಖಾಸಗಿ ಕಂಪನಿಯಲ್ಲಿ ಚಾಲಕರಾಗಿ ಕೆಲಸ ಮಾಡುತ್ತಿದ್ದ ಇವರಿಗೆ ಪತ್ನಿ ಸುಕನ್ಯಾ (34) ಹಾಗೂ 13 ವರ್ಷದ ಮಗ ಇದ್ದಾರೆ. ಅದೇನಾಯ್ತೋ ಗೊತ್ತಿಲ್ಲ!, ನಿನ್ನೆ ತಂದೆಗೆ ಫೋನ್ ಮಾಡಿರುವ ಈತ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ತಾನು ತೆಗೆದುಕೊಳ್ಳುತ್ತಿರುವ ನಿರ್ಧಾರದ ವಿಡಿಯೋ ಫೇಸ್ಬುಕ್ನಲ್ಲಿ ಲೈವ್ ಪ್ರಸಾರ ಮಾಡುವುದಾಗಿಯೂ ಹೇಳಿದ್ದರಂತೆ.
ಫೇಸ್ಬುಕ್ನಲ್ಲಿ ಆತ್ಮಹತ್ಯೆಯ ವಿಡಿಯೋ ನೋಡಿರುವ ಈತನ ಗೆಳೆಯರು ತಕ್ಷಣ ಪತ್ನಿಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಆಕೆ ಮನೆಗೆ ಬಂದು ನೋಡುವಷ್ಟರಲ್ಲಿ ಫ್ಯಾನ್ನಲ್ಲಿ ಮೃತದೇಹ ನೇತಾಡುತ್ತಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ವೈದ್ಯರು ಆತ ಸಾವನ್ನಪ್ಪಿದ್ದಾಗಿ ಘೋಷಿಸಿದ್ದಾರೆ.
ಈತ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಮರಣ ಪತ್ರ ದೊರೆತಿದ್ದು, ಅದರಲ್ಲಿ ನನ್ನ ಸಾವಿಗೆ ಯಾರೂ ಕಾರಣವಲ್ಲ. ಇಂತಹ ನಾಚಿಕೆಗೇಡಿನ ಜಗತ್ತಿನಲ್ಲಿ ನಾನು ಬದುಕಲು ಇಷ್ಟಪಡುವುದಿಲ್ಲ ಎಂದು ಬರೆದಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.