ಭೋಪಾಲ್(ಮಧ್ಯಪ್ರದೇಶ) : ಮಹಾಮಾರಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಪತ್ರಕರ್ತರೂ ಕೂಡ ಮುಂಚೂಣಿ ಕಾರ್ಯಕರ್ತರು ಎಂದು ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಸಿಂಗ್ ಚೌಹಾಣ್, ಸಾಂಕ್ರಾಮಿಕದ ಆರಂಭದಿಂದಲೂ ಕೋವಿಡ್, ಲಾಕ್ಡೌನ್ ಕುರಿತ ನಿಖರ ಮಾಹಿತಿಯನ್ನು ಜನರಿಗೆ ತಲುಪಿಸುವ, ಜಾಗೃತಿ ಮೂಡಿಸುವ ಕಾರ್ಯ ಮಾಡಿದ ಪತ್ರಕರ್ತರೂ ಮುಂಚೂಣಿ ಕಾರ್ಯಕರ್ತರು ಎಂದು ಹೇಳಿದ್ದಾರೆ.
ಇದನ್ನೂ ಓದಿ: 'ಪತ್ರಕರ್ತರು ಮುಂಚೂಣಿ ಕಾರ್ಯಕರ್ತರು'... ಒಡಿಶಾ ಸಿಎಂ ಘೋಷಣೆ
ಇದೇ ವೇಳೆ ಲಸಿಕೆಗಳು ಲಭ್ಯವಿಲ್ಲದ ಕಾರಣ ಮಧ್ಯಪ್ರದೇಶದಲ್ಲಿ ಮೇ 1 ರಿಂದ 18 ರಿಂದ 45 ವರ್ಷ ವಯಸ್ಸಿನವರಿಗೆ ವ್ಯಾಕ್ಸಿನೇಷನ್ ಆರಂಭವಾಗಿಲ್ಲ.
ಕೋವಿಶೀಲ್ಡ್, ಕೋವಾಕ್ಸಿಕ್ ಲಸಿಕೆಗಳ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಜೊತೆ ರಾಜ್ಯ ಸರ್ಕಾರ ಮಾತನಾಡಿದ್ದು, ಲಸಿಕೆಯ ಡೋಸ್ಗಳನ್ನು ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ ಎಂದು ತಿಳಿಸಿರುವುದಾಗಿ ಸಿಎಂ ಮಾಹಿತಿ ನೀಡಿದ್ದಾರೆ.
ಈಗಾಗಲೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ಪತ್ರಕರ್ತರನ್ನು ಮುಂಚೂಣಿ ಕಾರ್ಯಕರ್ತರು ಎಂದು ಘೋಷಣೆ ಮಾಡಿದ್ದಾರೆ.