ಮುಂಬೈ: ಶಿವಸೇನೆಯ ಅರ್ಜಿ ಮೇಲಿನ ವಿಚಾರಣೆ ಇನ್ನೂ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇರುವಾಗಲೇ ಶಿವಸೇನಾ ಶಿಂದೆ ಬಣಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಗಳನ್ನು ನೀಡಿದ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಶಿವಸೇನಾ ಠಾಕ್ರೆ ಬಣ ಸುಪ್ರೀಂಕೋರ್ಟ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಸುಪ್ರೀಂಕೋರ್ಟ್ನಲ್ಲಿ ತನ್ನ ಅರ್ಜಿಯ ಮೇಲಿನ ವಿಚಾರಣೆ ಇನ್ನೂ ನಡೆಯುತ್ತಿರುವಾಗಲೇ ಹಲವಾರು ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳದೇ ಚುನಾವಣಾ ಆಯೋಗ ಆದೇಶ ನೀಡಿರುವುದು ತಪ್ಪು. ಹೀಗಾಗಿ ಆಯೋಗದ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಶಿವಸೇನಾ ಠಾಕ್ರೆ ಬಣ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಶಿವಸೇನೆ ಹೆಸರು ಮತ್ತು ಅದರ ಬಿಲ್ಲು ಬಾಣ ಚಿಹ್ನೆ ಯಾರಿಗೆ ಸೇರಿದ್ದು ಎಂಬ ಬಗ್ಗೆ ಇತ್ತೀಚೆಗಷ್ಟೆ ಕೇಂದ್ರ ಚುನಾವಣಾ ಆಯೋಗ ತೀರ್ಪು ನೀಡಿದೆ. ಶಿಂದೆ ಗುಂಪಿಗೆ ಹೆಸರು ಮತ್ತು ಚಿಹ್ನೆಯನ್ನು ನೀಡಿ ಆಯೋಗ ಆದೇಶ ಹೊರಡಿಸಿದೆ. ಆಯೋಗದ ಈ ಆದೇಶದ ನಂತರ ಮಹಾರಾಷ್ಟ್ರ ರಾಜಕೀಯದಲ್ಲಿ ಭಾರಿ ಸಂಚಲನ ಉಂಟಾಗಿದೆ. ಚುನಾವಣಾ ಆಯೋಗದ ಕ್ರಮವನ್ನು ಉದ್ಧವ್ ಠಾಕ್ರೆ ಕಟುವಾಗಿ ಟೀಕಿಸಿದ್ದಾರೆ. ಆಯೋಗದ ಆದೇಶ ಪ್ರಶ್ನಿಸಿ ತಾವು ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಅವರು ಹೇಳಿದ್ದರು.
ಶಿವಸೇನೆ ಪಕ್ಷ ಮತ್ತು ಚಿಹ್ನೆಯನ್ನು ಕಿತ್ತುಕೊಳ್ಳುವ ಚುನಾವಣಾ ಆಯೋಗದ ನಿರ್ಧಾರವು ಪ್ರಜಾಪ್ರಭುತ್ವದ ಸಿದ್ಧಾಂತಗಳನ್ನು ಉಲ್ಲಂಘಿಸುತ್ತದೆ. 2018ರಲ್ಲಿ ನಡೆದ ಶಿವಸೇನೆ ಕಾರ್ಯಕಾರಿಣಿ ಸಭೆಯು ಕಾನೂನಾತ್ಮಕವಾಗಿ ನಡೆದಿಲ್ಲ ಎಂದು ಹೇಳಲಾಗಿದೆ. ಆದರೆ, ಪಕ್ಷದ ಸಂವಿಧಾನದ ಪ್ರಕಾರ ಈ ಕಾರ್ಯಕಾರಿ ಮಂಡಳಿಯನ್ನು ನೇಮಕ ಮಾಡಲಾಗಿದೆ. ಇದರ ಸಾಕ್ಷ್ಯವನ್ನು ಆಯೋಗಕ್ಕೆ ಸಲ್ಲಿಸಲಾಗಿದೆ.
ಎಲ್ಲಾ ಪದಾಧಿಕಾರಿಗಳು ಠಾಕ್ರೆ ಗುಂಪಿನ ಪರವಾಗಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಚುನಾಯಿತ ಶಾಸಕರು ಮತ್ತು ಸಂಸದರ ಸಂಖ್ಯೆಗೆ ಅನುಗುಣವಾಗಿ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದೆ. ಎರಡು ಬಣಗಳ ಮಧ್ಯೆ ವಿವಾದ ಏರ್ಪಟ್ಟಾಗ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಆದರೆ, ದೇಶದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಚುನಾವಣಾ ಆಯೋಗ ಇಂಥ ನಿರ್ಧಾರ ಕೈಗೊಂಡಿದ್ದು ಅನ್ಯಾಯವಾಗಿದೆ. ಇದು ಪ್ರಜಾಪ್ರಭುತ್ವ ಮತ್ತು ಕಾನೂನಿಗೆ ಕಳಂಕವಾಗಿದೆ ಎಂದು ಶಿವಸೇನೆ ಠಾಕ್ರೆ ಬಣದ ಅರ್ಜಿಯಲ್ಲಿ ಹೇಳಲಾಗಿದೆ.
ಮಹಾರಾಷ್ಟ್ರದಲ್ಲಿ ನಡೆದಿರುವ ಅಧಿಕಾರದ ಸಂಘರ್ಷದ ಕುರಿತಾದ ವಿಚಾರಣೆ ನಾಳೆ ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ತಾನು ಇವತ್ತು ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕೆಂದು ಶಿವಸೇನೆ ಠಾಕ್ರೆ ಬಣ ಕೋರಿದೆ. ನ್ಯಾಯಾಲಯದ ನಾಳೆಯ ವಿಷಯ ಪಟ್ಟಿಯಲ್ಲಿ ಈ ಅರ್ಜಿಯ ವಿಚಾರಣೆ ಸೇರ್ಪಡೆಯಾಗಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ.
ಚುನಾವಣಾ ಆಯೋಗವು ಫೆಬ್ರವರಿ 17 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣಕ್ಕೆ ಪಕ್ಷದ ಹೆಸರು 'ಶಿವಸೇನೆ' ಮತ್ತು 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ನೀಡಿದೆ. ಇದರಿಂದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣಕ್ಕೆ ಭಾರಿ ಹಿನ್ನಡೆಯಾದಂತಾಗಿದೆ. ಕಳೆದ ವರ್ಷದ ಜೂನ್‌ನಲ್ಲಿ, ಏಕನಾಥ್ ಶಿಂಧೆ ಉದ್ಧವ್ ವಿರುದ್ಧ ಬಂಡಾಯವೆದ್ದಿದ್ದರು ಮತ್ತು ಸುಮಾರು 40 ಶಾಸಕರನ್ನು ಬಿಜೆಪಿಯೊಂದಿಗೆ ಸೇರಲು ಮನವೊಲಿಸುವ ಮೂಲಕ ಅವರ ಮಹಾರಾಷ್ಟ್ರ ವಿಕಾಸ ಆಘಾಡಿ ಸರ್ಕಾರವನ್ನು ಉರುಳಿಸಿದ್ದರು.
ಇದನ್ನೂ ಓದಿ: ಶಿವಸೇನಾ ಹೆಸರು, ಚಿಹ್ನೆ ಖರೀದಿಗೆ 2 ಸಾವಿರ ಕೋಟಿ ಡೀಲ್: ಸಂಜಯ್ ರಾವತ್ ಗಂಭೀರ ಆರೋಪ