ಲಖನೌ(ಉತ್ತಪ್ರದೇಶ): ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ಬಿಜೆಪಿಗೆ ಬೆಂಬಲ ನೀಡುತ್ತಾರೆ. ಯೋಗಿ ಆದಿತ್ಯನಾಥ್ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಿಯಾ ಮುಖಂಡ, ಧರ್ಮಗುರು ತುರಾಜ್ ಜೈದಿ ಹೇಳಿಕೆ ನೀಡಿದ್ದಾರೆ.
'ಈಟಿವಿ ಭಾರತ್' ಜೊತೆ ಮಾನತಾಡಿದ ಅವರು, ಎಲ್ಲ ರಾಷ್ಟ್ರೀಯವಾದಿ ಮುಸ್ಲಿಮರು ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸುತ್ತಾರೆ. ಸಬ್ ಕಾ ಸಾಥ್, ಸಬ್ ಕಾ ಸಮ್ಮಾನ್, ಮತ್ತು ಸಬ್ ಕಾ ವಿಕಾಸ್ ಘೋಷಣೆಯಂತೆ ಬಿಜೆಪಿ ನೀಡಿದ ಭರವಸೆಗಳನ್ನು ಈಡೇರಿಸಿದೆ. ಯಾವುದೇ ತಾರತಮ್ಯ ಅಥವಾ ಪೂರ್ವಾಗ್ರಹ ಇಲ್ಲದೇ ಕೆಲಸ ಮಾಡಿದೆ. ಅದರ ಫಲಿತಾಂಶವು ಮಾರ್ಚ್ 10 ರಂದು ಎಲ್ಲರಿಗೂ ಗೊತ್ತಾಗಲಿದೆ ಎಂದು ಹೇಳಿದ್ದಾರೆ.
ಯೋಗಿ ಆದಿತ್ಯನಾಥ್ ರಾಜ್ಯದ ಮುಖ್ಯಮಂತ್ರಿಯಾಗಿ ಮತ್ತೆ ಆರಿಸಿ ಬರಲಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬಿಜೆಪಿ ಸರ್ಕಾರದ ಕೊಡುಗೆ ಅಪಾರವಿದೆ. ಅವರು ಮದರಸಾಗಳಲ್ಲಿ ಲ್ಯಾಪ್‌ಟಾಪ್ ಜೊತೆ ಕುರಾನ್ ಕೂಡ ನೀಡಿದ್ದಾರೆ. 370ನೇ ವಿಧಿ ರದ್ದು, ಕೊರೊನಾ ಸಾಂಕ್ರಾಮಿಕದ ವೇಳೆ ಹಿಂದೂಗಳು ಸೇರಿದಂತೆ ಮುಸ್ಲಿಂ ಕುಟುಂಬಗಳಿಗೂ ಯಾವುದೇ ತಾರತಮ್ಯ ಇಲ್ಲದೆ ಪಡಿತರ ವಿತರಿಸಿದ್ದಾರೆ ಎಂದು ತುರಾಜ್ ಜೈದಿ ಹೇಳಿದ್ದಾರೆ.
ಹೇಳಿಕೆಗೆ ಇನ್ನೊಬ್ಬ ಧರ್ಮಗುರು ಆಕ್ಷೇಪ: ಮತ್ತೊಂದೆಡೆ ಶಿಯಾ ವಿದ್ವಾಂಸ ಮೌಲಾನಾ ಕಲ್ಬೆ ಸಿಬ್ತೈನ್ ನೂರಿ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಶಿಯಾ ಮತಗಳು ಬಿಜೆಪಿಗೆ ಹೋಗುತ್ತವೆ ಎಂಬುದನ್ನು ನಾನು ಒಪ್ಪುವುದಿಲ್ಲ. ಇದು ನಿಜವೂ ಅಲ್ಲ ಎಂದಿದ್ದಾರೆ. ಅಲ್ಲದೇ, ಧರ್ಮಗುರುಗಳು ಇಂತಹ ಹೇಳಿಕೆಗಳನ್ನು ನೀಡಬಾರದು. ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಹಾಕುವಂತೆ ಸಲಹೆ ನೀಡಬಾರದು. ತಮ್ಮ ಹಕ್ಕನ್ನು ಸ್ವತಂತ್ರವಾಗಿ ಚಲಾಯಿಸುವ ಅಧಿಕಾರವನ್ನು ಮತದಾರರು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಶೇ.20 ರಷ್ಟು ಇರುವ ಮುಸ್ಲಿಂ ಮತಗಳೇ ನಿರ್ಣಾಯಕವಾಗಿವೆ. ಅದರಲ್ಲೂ ಶಿಯಾ ಸಮುದಾಯದ ಮತಗಳು ಹೆಚ್ಚಿವೆ. 403 ವಿಧಾನಸಭಾ ಕ್ಷೇತ್ರಗಳ ಪೈಕಿ 150 ಸ್ಥಾನಗಳ ಮೇಲೆ ಮುಸ್ಲಿಂ ಮತದಾರರು ಪ್ರಭಾವ ಬೀರಲಿದ್ದಾರೆ.
ಓದಿ: ನಿರ್ಬಂಧಗಳಿಂದ ಕೆರಳಿದ ರಷ್ಯಾ.. ಅಮೆರಿಕಕ್ಕೆ ಬಾಹ್ಯಾಕಾಶ ಕೇಂದ್ರದ ಬೆದರಿಕೆ