ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ಶುರುವಾಗಿದ್ದು, ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಸಾಧ್ಯತೆ ಇದೆ. ಈ ಬಗ್ಗೆ ಅವರು ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಈ ಅಧ್ಯಕ್ಷ ಚುನಾವಣೆಯ ಮಲಯಾಳಂ ದೈನಿಕ ಪತ್ರಿಕೆಯೊಂದಕ್ಕೆ ಅವರು ಬರೆದ ಲೇಖನದಲ್ಲಿ ಇದು ಪ್ರತಿಬಿಂಬಿಸಿದೆ.
ಸಾಂಸ್ಥಿಕ ಚುನಾವಣೆ ಮತ್ತು ಪಕ್ಷದಲ್ಲಿ ಬದಲಾವಣೆ ತರಲು ಕೋರಿ 2020 ರಲ್ಲಿ ಹಂಗಾಮಿ ಅಧ್ಯಕ್ಷ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದ ಜಿ-23 ಭಿನ್ನಮತೀಯ ನಾಯಕರ ಗುಂಪಿನ ಸದಸ್ಯರಾಗಿರುವ ಶಶಿ ತರೂರ್ ಅವರು ಇತ್ತೀಚೆಗಷ್ಟೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅವರು ಬರೆದ ಲೇಖನದಲ್ಲಿ ಪಕ್ಷವು ಅಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಲದೇ, ಚುನಾಯಿತರಾಗಬೇಕಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (ಸಿಡಬ್ಲ್ಯುಸಿ) ಹಲವು ಸ್ಥಾನಗಳಿಗೂ ಚುನಾವಣೆಯನ್ನು ಘೋಷಿಸಬೇಕಿತ್ತು. ಆಗ ಮಾತ್ರ ಇದು ಮುಕ್ತ ವಾತಾವರಣವನ್ನು ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದ್ದರು.
ಸಂಕೋಲೆ ರಹಿತ ಜನಾದೇಶ ಉತ್ತಮ: ಅಧ್ಯಕ್ಷರನ್ನು ಆಯ್ಕೆ ಮಾಡಲು ಎಐಸಿಸಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿಗೆ ಸಂಕೋಲೆರಹಿತ ವಾತಾವರಣ ನಿರ್ಮಾಣ ಮಾಡಬೇಕು. ವಿಶ್ವಾಸಾರ್ಹ ಜನಾದೇಶದ ಮೂಲಕ ಅಧ್ಯಕ್ಷರು ಆಯ್ಕೆಯಾದರೆ, ಪಕ್ಷವನ್ನು ಮುನ್ನಡೆಸಲು ನೆರವಾಗಲಿದೆ ಎಂದು ತರೂರ್ ಅವರು ಲೇಖನದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ರೀತಿಯ ಕಟ್ಟಳೆರಹಿತ ಸನ್ನಿವೇಶ ಸೃಷ್ಟಿ ಮಾಡುವುದರಿಂದ ಪಕ್ಷದ ಬಗ್ಗೆ ಜನರಲ್ಲಿ ಹೊಸ ಅಭಿಪ್ರಾಯ ಉಂಟಾಗಲು ಸಾಧ್ಯ. ಪಕ್ಷವನ್ನು ಪುನರುಜ್ಜೀವನಗೊಳಿಸಲು ಇದು ನೆರವಾಗಲಿದೆ. ಪಕ್ಷಕ್ಕೆ ಈಗಿನ ಸ್ಥಿತಿಗೆ ತೀರಾ ಅನಿವಾರ್ಯವಾಗಿದೆ. ಅನೇಕ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವ ನಿರೀಕ್ಷೆ ಇದೆ ಎಂದು ಹೇಳುವ ಮೂಲ ತಾವೂ ಕೂಡ ಅಖಾಡಲ್ಲಿದ್ದೇವೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ಒಲ್ಲೆ ಎಂದ ರಾಹುಲ್: ಪಕ್ಷದ ಅಧ್ಯಕ್ಷರಾಗಲು ರಾಹುಲ್ ಗಾಂಧಿ ಒಪ್ಪಿಗೆ ಸೂಚಿಸುತ್ತಿಲ್ಲ. ಇದರಿಂದ ಪಕ್ಷದ ಇಕ್ಕಟ್ಟಿಗೆ ಸಿಲುಕಿದೆ. ಗಾಂಧಿ ಕುಟುಂಬದ ಹೊರತಾಗಿ ಬೇರೆಯವರು ಅಧ್ಯಕ್ಷರಾಗಲಿ ಎಂಬುದು ಜಿ-23 ಬಣದ ಕೂಗಾಗಿದೆ. ರಾಹುಲ್ ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಪಕ್ಷದ ಕೆಲ ನಾಯಕರ ಒತ್ತಾಯವಾಗಿದೆ.
ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರು ರಾಹುಲ್ ಮತ್ತೆ ಅಧ್ಯಕ್ಷರಾಗಬೇಕು. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬೆಂಬಲ ಇರುವ ವ್ಯಕ್ತಿ ಅವರಾಗಿದ್ದಾರೆ. ಹೀಗಾಗಿ ಅವರು ಮತ್ತೆ ಅಧ್ಯಕ್ಷರಾದರೆ ಪಕ್ಷ ಗಟ್ಟಿಯಾಗಲಿದೆ ಎಂದು ಹೇಳಿಕೆ ನೀಡಿದ್ದರು.
ಅಶೋಕ್ ಗೆಹ್ಲೋಟ್ ಹೆಸರು ಚಾಲ್ತಿಗೆ: ರಾಜಸ್ಥಾನದ ಮುಖ್ಯಮಂತ್ರಿ, ಗಾಂಧಿ ಕುಟುಂಬದ ನಿಷ್ಟಾವಂತ ವ್ಯಕ್ತಿಯಾಗಿರುವ ಅಶೋಕ್ ಗೆಹ್ಲೋಟ್ ಅವರು ಅಧ್ಯಕ್ಷರಾದರೆ, ಗಾಂಧಿ ಕುಟುಂಬ ಅವರನ್ನು ಬೆಂಬಲಿಸಲಿದೆ ಎಂಬ ಮಾತು ಕೇಳಿ ಬಂದಿದೆ. ಈ ಬಗ್ಗೆ ಗೆಹ್ಲೋಟ್ ಅವರ ಬಳಿಯೂ ಚರ್ಚಿಸಲಾಗಿದ್ದು, ಇದಕ್ಕೆ ಅವರು ಸಮ್ಮತಿಸಿಲ್ಲ ಎನ್ನಲಾಗಿದೆ.
ಓದಿ: ಫ್ರಾನ್ಸ್ನ ಬರ್ನಾರ್ಡ್ ಅರ್ನಾಲ್ಡ್ ಹಿಂದಿಕ್ಕಿದ ಗೌತಮ್ ಅದಾನಿ ವಿಶ್ವದ ಮೂರನೇ ಸಿರಿವಂತ ವ್ಯಕ್ತಿ