ನಾಸಿಕ್(ಮಹಾರಾಷ್ಟ್ರ): ಪ್ರಧಾನಿ ನರೇಂದ್ರ ಮೋದಿ ಅವರ ಶೈಕ್ಷಣಿಕ ಅರ್ಹತೆ ಬಗ್ಗೆ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಕೆಲ ಪ್ರತಿಪಕ್ಷಗಳ ನಾಯಕರಯ ಎತ್ತಿರುವ ಪ್ರಶ್ನೆಗಳ ನಡುವೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಇದು ರಾಷ್ಟ್ರೀಯ ವಿಷಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಸಿಕ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು "ನಿರುದ್ಯೋಗ, ಹಣದುಬ್ಬರ ಮತ್ತು ಕಾನೂನು ಮತ್ತು ಸುವ್ಯವಸ್ಥೆಯಂತಹ ಗಂಭೀರ ಸಮಸ್ಯೆಗಳಿರುವಾಗ, ಯಾರೊ ಒಬ್ಬರ ಶೈಕ್ಷಣಿಕ ಪದವಿಯು ದೇಶದಲ್ಲಿ ರಾಜಕೀಯ ವಿಷಯವಾಗಬೇಕೇ" ಎಂದು ಪವಾರ್ ಪ್ರಶ್ನಿಸಿದ್ದಾರೆ.
“ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಅಕಾಲಿಕ ಮಳೆಯಿಂದಾಗಿ ಬೆಳೆಗಳು ನಾಶವಾಗಿವೆ. ಈ ವಿಷಯಗಳ ಕುರಿತು ಚರ್ಚೆ ನಡೆಸಬೇಕಾದ ಅಗತ್ಯ ಈಗಿದೆಯೇ ವಿನಃ ಯಾರದ್ದೋ ಶೈಕ್ಷಣಿಕ ಅರ್ಹತೆ ವಿಷಯದಿಂದ ಆಗಬೇಕಾಗಿರುವುದು ಏನು ಎಂದು ಪವಾರ್ ಪ್ರಶ್ನಿಸಿದ್ದು, ತುರ್ತು ಅಗತ್ಯಗಳ ಬಗ್ಗೆ ಚರ್ಚೆ ಆಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಪದವಿ ಪಡೆದಿರುವ ಕುರಿತು ಸಲ್ಲಿಸಿದ್ದ ಕೇಜ್ರಿವಾಲ್ ಅವರ ಅರ್ಜಿ ವಜಾ ಮಾಡಿದ್ದ ಗುಜರಾತ್ ಹೈಕೋರ್ಟ್ 25,000 ರೂಪಾಯಿ ದಂಡ ವಿಧಿಸಿತ್ತು. ಆ ನಂತರವೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರಧಾನಿ ಅವರ ಶೈಕ್ಷಣಿಕ ಅರ್ಹತೆಯ ವಿಷಯವಾಗಿ ಟೀಕಾ ಪ್ರಹಾರ ಮುಂದುವರಿಸಿದ್ದರು.
ಇದನ್ನೂ ಓದಿ:ಅಮೃತ್ಪಾಲ್ ಸಿಂಗ್ ಸಹಚರ ಪಾಪಲ್ಪ್ರೀತ್ ಸಿಂಗ್ ಬಂಧನ: ಹೋಶಿಯಾರ್ಪುರದಲ್ಲಿ ಬಲೆಗೆ ಕೆಡವಿದ ಪಂಜಾಬ್ ಪೊಲೀಸರು
ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅದಾನಿ ಗ್ರೂಪ್ ಮೇಲೆ ಹಗರಣದ ಆರೋಪ ಹೊರಿಸಿರುವ ಅಮೆರಿಕದ ಹಿಂಡನ್ಬರ್ಗ್ ವರದಿ "ಉದ್ದೇಶಪೂರ್ವಕ" ಎಂದೆನಿಸುತ್ತಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಜಂಟಿ ಸಂಸದೀಯ ಸಮಿತಿ ರಚನೆ ಮಾಡುವ ಅಗತ್ಯವಿಲ್ಲ ಎಂದೂ ಹೇಳಿದ್ದರು.
ಅದಾನಿ ಮತ್ತು ಪ್ರಧಾನಿ ಮೋದಿ ಅವರ ಸ್ನೇಹ ಪ್ರಶ್ನಿಸಿ, ಗ್ರೂಪ್ ಮೇಲೆ ಕೇಳಿ ಬಂದ ಆರೋಪಗಳ ಬಗ್ಗೆ ತನಿಖೆ ನಡೆಸಲು ತೀವ್ರ ಹೋರಾಟ ನಡೆಸುತ್ತಿರುವ ಕಾಂಗ್ರೆಸ್ಗೆ ಅದರ ಮಿತ್ರಪಕ್ಷದ ನಾಯಕನ ಈ ಹೇಳಿಕೆ ಅಚ್ಚರಿ ತಂದಿತ್ತು. ಜೆಪಿಸಿ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಜೊತೆಗೂಡಿ ಹಲವು ವಿಪಕ್ಷಗಳು ಹೋರಾಟ ನಡೆಸಿದ್ದವು. ಆದರೆ ಅದು ಸಾಧ್ಯವಾಗಿರಲಿಲ್ಲ.
ಅದಾನಿ ಗ್ರೂಪ್ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ಸಮಿತಿ ನೇಮಿಸಿದೆ. ಹೀಗಾಗಿ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಯ ಅಗತ್ಯವಿಲ್ಲ. ಹಿಂಡೆನ್‌ಬರ್ಗ್ ಸಂಶೋಧನಾ ವರದಿಯಲ್ಲಿ ಅದಾನಿ ಗ್ರೂಪ್ ಅನ್ನು ಉದ್ದೇಶಪೂರ್ವಕವಾಗಿ ಗುರಿಪಡಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಪವಾರ್ ಹೇಳಿದ್ದರು. ಅದಕ್ಕೆ ಕಾರಣ ನೀಡಿದ್ದ ಪವಾರ್, ಜಂಟಿ ಸಂಸದೀಯ ಸಮಿತಿಯಲ್ಲಿ ಆಡಳಿತ ಪಕ್ಷಕ್ಕೆ ಬಹುಮತ ಇರುವುದರಿಂದ ಏನೂ ಪ್ರಯೋಜನ ಇಲ್ಲ. ಸುಪ್ರೀಂಕೋರ್ಟ್ ರಚಿಸಿರುವ ತನಿಖಾ ಸಮಿತಿಯೇ ಸಾಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳು , ತಜ್ಞರು, ಆಡಳಿತಗಾರರು ಮತ್ತು ಅರ್ಥಶಾಸ್ತ್ರಜ್ಞರನ್ನು ಹೊಂದಿರುವ ತನಿಖಾ ಸಮಿತಿಯನ್ನು ಸರ್ವೋಚ್ಛ ನ್ಯಾಯಾಲಯ ನೇಮಕ ಮಾಡಿ ಆದೇಶ ಹೊರಡಿಸಿದೆ. ಹೀಗಾಗಿ ಇನ್ನೊಂದು ಸಮಿತಿಯ ತನಿಖೆ ಅಗತ್ಯವಿಲ್ಲ ಎಂದು ಪವಾರ್ ಹೇಳಿದ್ದರು.