ಮುಂಬೈ(ಮಹಾರಾಷ್ಟ್ರ): ರಾಷ್ಟ್ರೀಯ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ)ನ ಮುಖ್ಯಸ್ಥರಾಗುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದ್ದು, ಈ ವರದಿಯನ್ನು ಶರದ್ ಪವಾರ್ ತಳ್ಳಿಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಪವಾರ್, ಕೆಲ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹರಡಿಸುತ್ತಿವೆ ಎಂದಿದ್ದಾರೆ. ದಿನದಿಂದ ದಿನಕ್ಕೆ ಕಾಂಗ್ರೆಸ್ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ. ಎಲ್ಲ ವಿಪಕ್ಷಗಳು ಒಟ್ಟುಗೂಡಿ ಹೊಸ ನಾಯಕತ್ವದ ಬಗ್ಗೆ ಬಲವಾದ ನಿರ್ಧಾರ ಕೈಗೊಳ್ಳಬೇಕೆಂದು ಶಿವಸೇನಾ ಸಂಸದ ಸಂಜಯ್ ರಾವತ್ ಹೇಳಿದ್ದರು. ಇದರ ಬೆನ್ನಲ್ಲೇ ಶರದ್ ಪವಾರ್, ಕೆಲ ಮಾಧ್ಯಮಗಳ ವರದಿ ಸುಳ್ಳು ಎಂದಿದ್ದಾರೆ.
ಶರದ್ ಪವಾರ್ ಅವರು ಯುಪಿಎ ಮುಖ್ಯಸ್ಥರಾದರೆ ಸಂತೋಷ. ಆದರೆ, ಅವರು ಇದನ್ನು ನಿರಾಕರಿಸಿದ್ದಾರೆ. ಒಂದು ವೇಳೆ ಅಧಿಕೃತವಾಗಿ ಪ್ರಸ್ತಾಪ ಬಂದರೆ ಬೆಂಬಲಿಸುವುದಾಗಿ ರಾವತ್ ಹೇಳಿದ್ದಾರೆ. ಶರದ್ ಪವಾರ್ ಅವರು ಯುಪಿಎ ಅಧ್ಯಕ್ಷರಾಗುವ ಬಗ್ಗೆ ಬೆಂಬಲಿತ ಪಕ್ಷಗಳಲ್ಲಿ ಯಾವುದೇ ಚರ್ಚೆಯಾಗಿಲ್ಲ. ಅಂತಹ ಪ್ರಸ್ತಾಪ ಬಂದಿಲ್ಲ. ಸದ್ಯ ನಡೆಯುತ್ತಿರುವ ರೈತರ ಪ್ರತಿಭಟನೆಯ ವಿಚಾರದ ಹಾದಿ ತಪ್ಪಿಸಲು ಇಂತಹ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ ಎಂದು ಎನ್‌ಸಿಪಿ ಆಕ್ರೋಶ ವ್ಯಕ್ತಪಡಿಸಿದೆ.