ಮುಂಬೈ(ಮಹಾರಾಷ್ಟ್ರ): ಮಹಾರಾಷ್ಟ್ರದಲ್ಲಿ 2019ರಲ್ಲಿ ಬಿಜೆಪಿ ಸರ್ಕಾರ ಪತನವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಷನಲಿಷ್ಟ್ ಕಾಂಗ್ರೆಸ್ ಪಕ್ಷದ(ಎನ್‌ಸಿಪಿ) ಜೊತೆ ಮೈತ್ರಿ ಮಾಡಿಕೊಳ್ಳಲು ಕೇಳಿಕೊಂಡಿದ್ದರು ಎಂದು ಪಕ್ಷದ ಅಧ್ಯಕ್ಷ ಶರದ್ ಪವಾರ್ ಹೇಳಿಕೆ ನೀಡಿದ್ದು, ಇದು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿರುವ ಶರದ್ ಪವಾರ್, ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರ ರಚನೆಗೆ ಎನ್ಸಿಪಿಯ ಬೆಂಬಲ ಕೋರಿದ್ದರು. ಇದಲ್ಲದೇ, ಮೈತ್ರಿ ಮಾಡಿಕೊಂಡರೆ ತಮ್ಮ ಪುತ್ರಿ, ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಹುದ್ದೆ ನೀಡುವ ಆಶ್ವಾಸನೆ ನೀಡಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಆದರೆ, ಪ್ರಧಾನಿ ಮೋದಿ ಅವರ ಈ ಪ್ರಸ್ತಾವವನ್ನು ನಾನು ತಿರಸ್ಕರಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಎನ್‌ಸಿಪಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಎರಡೂ ಪಕ್ಷಗಳು ವಿರುದ್ಧ ಸಿದ್ಧಾಂತಗಳನ್ನು ಅನುಸರಿಸುತ್ತಿವೆ ಎಂದು ಪ್ರಧಾನಿ ಕಚೇರಿಯಲ್ಲೇ ಮೋದಿಗೆ ತಿಳಿಸಿದ್ದೆ ಎಂದು ಹೇಳಿದ್ದಾರೆ.
ಪ್ರಧಾನಿ ಮನವಿ ತಿರಸ್ಕರಿಸಿದ್ದ ಪವಾರ್
ಇದಲ್ಲದೇ, ಶರದ್ ಪವಾರ್ ಅವರ ಮೈತ್ರಿ ಹೇಳಿಕೆ ಸಮರ್ಥಿಸಿಕೊಂಡಿರುವ ಎನ್‌ಸಿಪಿ ರಾಷ್ಟ್ರೀಯ ವಕ್ತಾರ, ಸಚಿವ ನವಾಬ್ ಮಲಿಕ್, ಪ್ರಧಾನಿ ಮೋದಿ ಅವರು ಎನ್‌ಸಿಪಿ ಜತೆ ಕೈಜೋಡಿಸಲು ಸಿದ್ಧರಾಗಿದ್ದರು. ಈ ಬಗ್ಗೆ ಪ್ರಧಾನಿ ಕಚೇರಿಯಲ್ಲಿ ಮಾತುಕತೆ ನಡೆಯಿತು. ಇದಕ್ಕೆ ನಾನೇ ಸಾಕ್ಷಿಯಾಗಿದ್ದೆ. ಶರದ್ ಪವಾರ್ ಅವರು ಪ್ರಧಾನಿಯ ಈ ಆಹ್ವಾನವನ್ನು ತಿರಸ್ಕರಿಸಿದರು ಎಂದು ಹೇಳಿದ್ದಾರೆ.
2019 ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಪಡೆದಿರಲಿಲ್ಲ. ಈ ವೇಳೆ ಶರದ್ ಪವಾರ್ ಅವರ ಅಳಿಯ ಅಜಿತ್ ಪವಾರ್ ತಮ್ಮ ಶಾಸಕರ ಬೆಂಬಲದೊಂದಿಗೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದರು.
ಕೊನೆ ಕ್ಷಣದಲ್ಲಿ ಅಜಿತ್ ಪವಾರ್ ಬಿಜೆಪಿಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಬಳಿಕ ಸರ್ಕಾರ ಪತನವಾಗಿತ್ತು. ಇದಾದ ಬಳಿಕ ಕಾಂಗ್ರೆಸ್, ಎನ್‌ಸಿಪಿ ಮತ್ತು ಶಿವಸೇನೆ ಸೇರಿ 'ಮಹಾ ವಿಕಾಸ್ ಅಘಾಡಿ' ರಚಿಸಿಕೊಂಡು ಸರ್ಕಾರ ರಚನೆ ಮಾಡಿ ಆಡಳಿತ ನಡೆಸುತ್ತಿವೆ.
ಇದನ್ನೂ ಓದಿ: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಮಿಕ್ರಾನ್ ಹೆಚ್ಚಳ.. ಕೇಂದ್ರ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ಗಂಟೆ