ಬಾರ್ಪೇಟಾ (ಅಸ್ಸೋಂ): ವರನ ಕಡೆಯಿಂದ ವಧುವಿಗೆ ಉಡುಗೊರೆಯಾಗಿ ನೀಡಲಾಗಿದ್ದ ಶಾಂಪೂ ಹಾಗೂ ಇತರ ವಸ್ತುಗಳ ಕಾರಣಕ್ಕಾಗಿಯೇ ಮದುವೆಯೊಂದು ಮುರಿದು ಬಿದ್ದ ವಿಚಿತ್ರ ಘಟನೆ ಅಸ್ಸೋಂನ ಬಾರ್ಪೇಟಾ ಜಿಲ್ಲೆಯಲ್ಲಿ ನಡೆದಿದೆ.
ಗುವಾಹಟಿ ಮೂಲದ ಇಂಜಿನಿಯರ್ಗೆ ಮದುವೆ ನಿಶ್ಚಯವಾಗಿತ್ತು. ಜುರಾನ್ ಎಂದರೆ ಮದುವೆಯ ದಿನದ ಒಂದು ಅಥವಾ ಎರಡು ದಿನಗಳ ಮೊದಲು ಆಚರಿಸಲಾಗುವ ಪದ್ಧತಿ ಭಾಗವಾಗಿ ವಧುವಿಗೆ ಹಲವು ಉಡುಗೊರೆಗಳನ್ನು ನೀಡಲಾಗಿತ್ತು. ಆದರೆ, ಹೀಗೆ ನೀಡಲಾದ ಉಡುಗೊರೆಗಳಲ್ಲಿ ಶಾಂಪೂ ಸೇರಿದಂತೆ ಇತರ ವಸ್ತುಗಳು ಕಳಪೆ ಗುಣಮಟ್ಟದ್ದು ಎಂದು ದೂಷಿಸಿ ವಧು, ವರನಿಗೆ ವಾಟ್ಸ್ಆ್ಯಪ್ ಸಂದೇಶ ರವಾನಿಸಿದ್ದಳು.
ಇದನ್ನೂ ಓದಿ: ವರ ತೊದಲುವುದು ಕಂಡು ಮದುವೆ ನಿಲ್ಲಿಸಿದ ವಧು..! ಆ ಮೇಲೆ ನಡೆದಿದ್ದೇನು ಗೊತ್ತೇ?
ಇಂಜಿನಿಯರ್ ಆಗಿರುವ ವರನ ಯೋಗ್ಯತೆ ಪ್ರಶ್ನಿಸುವ ರೀತಿಯಲ್ಲಿ ಈ ಸಂದೇಶವಿತ್ತು. ವಧುವಿನ ವರ್ತನೆಯಿಂದ ಅವಮಾನಗೊಂಡಂತಾದ ವರನು ಮರು ದಿನ ನಡೆಯಬೇಕಿದ್ದ ಮದುವೆಯನ್ನೇ ರದ್ದು ಮಾಡಿದ್ದಾನೆ. ಡಿಸೆಂಬರ್ 14ರಂದು ರಾತ್ರಿ ಏಕಾಏಕಿ ವರ ನಿರ್ಧಾರ ತೆಗೆದುಕೊಂಡಿದ್ದಾನೆ.!
ವರನ ನಿರ್ಧಾರದಿಂದ ಆಘಾತಗೊಂಡ ವಧುವಿನ ಕುಟುಂಬ: ಈ ಮದುವೆಗೆ ಕೇವಲ ಆರು ಗಂಟೆಗಳು ಮಾತ್ರ ಸಮಯ ಇತ್ತು. ಆದರೆ, ವರ ರಾತ್ರೋರಾತ್ರಿ ಮದುವೆ ಆಗುವುದಿಲ್ಲ ಎಂದು ಘೋಷಿಸಿದ್ದ. ಅಲ್ಲದೇ, ತನ್ನ ನಿರ್ಧಾರವನ್ನು ವಧುವಿನ ಕುಟುಂಬಕ್ಕೂ ತಿಳಿಸಿ ಬಿಟ್ಟ. ವರನ ಈ ನಿರ್ಧಾರದಿಂದ ವಧುವಿನ ಕುಟುಂಬ ಆಘಾತಕ್ಕೊಳಗಾಗಿದೆ.
ಇದನ್ನೂ ಓದಿ: ವರನ ಮೂಗು ಚಿಕ್ಕದು ಅಂತ ಮದುವೆ ಕ್ಯಾನ್ಸಲ್ ಮಾಡಿದ ವಧು!
ನಮ್ಮ ಹುಡುಗಿಯನ್ನು ಕ್ಷಮಿಸಿ ಮದುವೆಯಾಗುವಂತೆ ವರನನ್ನು ಮನವೊಲಿಸಲು ವಧುವಿನ ಕುಟುಂಬಸ್ಥರು ಧಾವಿಸಿ ಬಂದಿದ್ದಾರೆ. ಆದರೆ, ಅದು ಕೈಗೂಡಲಿಲ್ಲ. ತಮ್ಮ ಹುಡುಗಿಯನ್ನು ಮದುವೆಯಾಗುವಂತೆ ವರನಿಗೆ ಮನವರಿಕೆ ಮಾಡುವಲ್ಲಿ ಸಫಲರಾಗಿಲ್ಲ. ಕೊನೆಗೆ ದಿಢೀರ್ ಮದುವೆ ನಿಲ್ಲಿಸಿದ ವರನ ವಿರುದ್ಧ ಯುವತಿಯ ಕುಟುಂಬ ಪೊಲೀಸ್ ಮೆಟ್ಟಿಲೇರಿದೆ. ಈ ಬಗ್ಗೆ ದೂರು ಸ್ವೀಕರಿಸಿರುವ ಪೊಲೀಸರು ತನಿಖೆಯ ಭಾಗವಾಗಿ ವಾಟ್ಸಾಪ್ ಸಂದೇಶದ ಪಠ್ಯವನ್ನು ಸಂಗ್ರಹಿಸಿದ್ದಾರೆ.
ಇದನ್ನೂ ಓದಿ: ಸೆಲ್ಫಿ ಕ್ಲಿಕ್ಕಿಸಲು ಹೋಗಿ 120 ಅಡಿ ಆಳದ ನೀರಿನ ಕೊಳಕ್ಕೆ ಬಿದ್ದ ವಧು: ಮದುವೆ ಸ್ಥಗಿತ