ಶಹಜಹಾನ್‌ಪುರ(ಉತ್ತರಪ್ರದೇಶ): 18 ವರ್ಷಗಳ ಹಿಂದೆ ಇಬ್ಬರು ವ್ಯಕ್ತಿಗಳನ್ನು ಹತ್ಯೆಗೈದ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸುವಂತೆ ಶಹಜಹಾನ್‌ಪುರ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಜಲಾಲಾಬಾದ್‌ನಲ್ಲಿ 18 ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅಪರಾಧ ವಿಭಾಗದ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಎಸ್.ಆನಂದ್ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸಂಪೂರ್ಣ ಮಾಹಿತಿ ನೀಡಿದ ಸಾವಿಗೀಡಾದ ವ್ಯಕ್ತಿಗಳ ಪರ ವಕೀಲ ಎಜಾಜ್ ಹಸನ್, 2004ರ ಅಕ್ಟೋಬರ್ 3ರಂದು ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಚಚುಪುರದ ಇಬ್ಬರು ಗ್ರಾಮಸ್ಥರಾದ ಪ್ರಹ್ಲಾದ್ ಮತ್ತು ಧನಪಾಲ್ ಅವರನ್ನು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಪೊಲೀಸರು ಬಂಧಿಸಿದ್ದರು. ಬಂಧಿಸಿದ ನಂತರ ಪೊಲೀಸರು ಇಬ್ಬರನ್ನೂ ಗುಂಡಿಕ್ಕಿ ಕೊಂದಿದ್ದಾರೆ ಎಂದು ಅವರು ಹೇಳಿದ್ದಾರೆ.
ಘಟನೆ ಸಂಬಂಧ ಪ್ರಹ್ಲಾದ್ ಅವರ ಸಹೋದರ ರಾಮ್ ಕೀರ್ತಿ ವಿವಿಧ ಆಯೋಗಗಳು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ವಿಚಾರಣೆ ನಡೆಯದ ಕಾರಣ, ನವೆಂಬರ್ 24, 2012 ರಂದು ಪೊಲೀಸರ ವಿರುದ್ಧವೇ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಸಾಕಷ್ಟು ಸಮಯ ಕಳೆದಿದೆ ಎಂದು ಹೇಳಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಮೇಲ್ಮನವಿ ತಿರಸ್ಕರಿಸಿದ್ದರು. ಪರಿಣಾಮ ಅಂತಿಮ ವರದಿಯನ್ನೂ ಸಲ್ಲಿಸಲಾಗಿತ್ತು.
ಇದನ್ನೂ ಓದಿ: ವಿದ್ಯುತ್ ಟ್ರಾನ್ಸಫಾರ್ಮರ್ ಸಿಡಿದು ಸುಟ್ಟಹೋಯ್ತು ಕಟಾವಿಗೆ ಬಂದಿದ್ದ ಮೆಕ್ಕೆಜೋಳ
ತರುವಾಯ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲಾಗಿ ಅಲ್ಲಿ ವಾದ-ವಿವಾದಗಳ ನಂತರ ಪ್ರಕರಣದ ಮೇಲೆ ಶಂಕೆ ವ್ಯಕ್ತವಾದ ಹಿನ್ನೆಲೆ ಈ ಆದೇಶ ಹೊರಬಿದ್ದಿದೆ ಎಂದು ವಿವರಿಸಿದರು. ಪ್ರಕರಣ ಸಂಬಂಧ 18 ಪೊಲೀಸರ ವಿರುದ್ಧ ಐಪಿಸಿ ಸೆಕ್ಷನ್ 302/34 ರ ಅಡಿಯಲ್ಲಿ ಕೇಸ್ ದಾಖಲಿಸಲು ಆದೇಶಿಸಲಾಗಿದೆ ಎಂದು ಖಾನ್ ಹೇಳಿದರು.