ಕೋಲ್ಕತ್ತಾ (ಪಶ್ಚಿಮ ಬಂಗಾಳ): ಲೈಂಗಿಕ ಕಿರುಕುಳ ಆರೋಪದ ಮೇಲೆ ಕೋಲ್ಕತ್ತಾದ ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯ ಮಹಾನಿರ್ದೇಶಕ ಸಹದೇಬ್ ಸರ್ಕಾರ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಐಐಎಂಸಿ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಆಂತರಿಕ ದೂರುಗಳ ಸಮಿತಿಯಲ್ಲಿ (ICC) ಮಹಾನಿರ್ದೇಶಕ ಸಹದೇಬ್ ಸರ್ಕಾರ್ ಅವರ ವಿರುದ್ಧ ಇತ್ತೀಚೆಗೆ ಕೆಲಸದ ಸ್ಥಳದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಕ್ಕಾಗಿ, POSH ಕಾಯ್ದೆ 2013ರ ಅಡಿಯಲ್ಲಿ ಲಿಖಿತ ದೂರು ದಾಖಲಾಗಿತ್ತು. ಈ ವಿಷಯವನ್ನು ಆಡಳಿತ ಮಂಡಳಿಗೆ ತಿಳಿಸಲಾಗಿತ್ತು ಎಂದು ಇನ್ಸ್ಟಿಟ್ಯೂಟ್ ಹೇಳಿಕೆಯಲ್ಲಿ ತಿಳಿಸಿದೆ.
ಲಿಖಿತ ದೂರಿನ ಆಧಾರದ ಮೇಲೆ, ಐಸಿಸಿ ಆಂತರಿಕ ತನಿಖೆ ನಡೆಸಿತ್ತು. ಸಹದೇಬ್ ಸರ್ಕಾರ್ ಅವರ ಅಧಿಕಾರಾವಧಿಯಲ್ಲಿನ ಎಲ್ಲಾ ಪದವೀಧರ ಪ್ರಾಧ್ಯಾಪಕರು ಹಾಗೂ ಇತರ ಸಿಬ್ಬಂದಿಯೊಂದಿಗೆ ಮಾತನಾಡುವ ಮೂಲಕ ಆಂತರಿಕ ತನಿಖೆ ಕೈಗೊಳ್ಳಲಾಗಿತ್ತು. ತನಿಖೆಯ ವರದಿ ಆಧಾರದ ಮೇಲೆ ಸರ್ಕಾರ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಮಂಗಳವಾರ ಸಂಜೆ ಅಧಿಸೂಚನೆ ಹೊರಡಿಸಿದ ಸಂಸ್ಥೆಯು, ಐಸಿಸಿ ಶಿಫಾರಸ್ಸಿನ ನಂತರ ಸರ್ಕಾರ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಆರೋಪಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದೆ.
ಸರ್ಕಾರ್ ಅವರ ಜಾಗಕ್ಕೆ, ಅತ್ಯಂತ ಹಿರಿಯ ಪ್ರಾಧ್ಯಾಪಕ ಸದಸ್ಯ ಪ್ರೊಫೆಸರ್ ಸೈಬಲ್ ಚಟ್ಟೋಪಾಧ್ಯಾಯ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪ್ರಭಾರ ನಿರ್ದೇಶಕರನ್ನಾಗಿ ನೇಮಿಸಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೋರ್ಡ್ನ ಗವರ್ನರ್ಗಳು ಜನವರಿ 6 ರಂದು ವಿಶೇಷ ಸಭೆಯನ್ನು ನಡೆಸಿದೆ. ಸಭೆಯಲ್ಲಿ ಪ್ರೊಫೆಸರ್ ಸಹದೇಬ್ ಸರ್ಕಾರ್ ಸಂಸ್ಥೆಯಲ್ಲಿ ಯಾವುದೇ ಹುದ್ದೆಯಲ್ಲಿ ಮುಂದುವರಿಯಬಾರದು, ತಕ್ಷಣವೇ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಎನ್ನುವ ಐಸಿಸಿ ಶಿಫಾರಸ್ಸನ್ನು ಗವರ್ನರ್ಗಳನ್ನು ಒಪ್ಪಿಕೊಂಡಿದ್ದಾರೆ.
ಈ ಮೂಲಕ ಸರ್ಕಾರ್ ಅವರು ತಮ್ಮ ಅವಧಿ ಮುಗಿಯುವ ಮುನ್ನವೇ ನಿರ್ದೇಶಕ ಸ್ಥಾನದಿಂದ ಕೆಳಗಿಳಿದ ಮೂರನೇ ನಿರ್ದೇಶಕರಾಗಿದ್ದಾರೆ.
ಇದನ್ನೂ ಓದಿ: ಹರಿಯಾಣ ವಿವಿ ಪ್ರಾಧ್ಯಾಪಕನ ವಿರುದ್ಧ 500 ವಿದ್ಯಾರ್ಥಿನಿಯರಿಂದ ಲೈಂಗಿಕ ಕಿರುಕುಳ ಆರೋಪ!