ಮುಂಬೈ: ಇಂದು ನೈರುತ್ಯ ಮುಂಗಾರು ಮುಂಬೈ ಪ್ರವೇಶಿಸಿದೆ. ಮುಂಜಾನೆ ಮಹಾರಾಷ್ಟ್ರದ ಮುಂಬೈ ಮತ್ತು ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಪರಿಣಾಮ ರಸ್ತೆಗಳು ಜಲಾವೃತಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇದರ ಪರಿಣಾಮ ಸಂಚಾರ ಮತ್ತು ಸ್ಥಳೀಯ ರೈಲು ಸೇವೆಗೆ ತೊಡಕುಂಟಾಗಿದೆ.
ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಮಧ್ಯಮ ಮಳೆಯಾಗುವ ಮುನ್ಸೂಚನೆ ಇದ್ದು, ಕೆಲವು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಕೊಲಾಬಾ ವೀಕ್ಷಣಾಲಯ ಮತ್ತು ಸಾಂತಾಕ್ರೂಜ್ ವೀಕ್ಷಣಾಲಯದಲ್ಲಿ ಕ್ರಮವಾಗಿ 77.4 ಮಿ.ಮೀ ಮತ್ತು 59.6 ಮಿ.ಮೀ ಮಳೆ ದಾಖಲಾಗಿದೆ ಎಂದು ಐಎಂಡಿ ಹೇಳಿದೆ.
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಮುಂಬೈ ಮತ್ತು ಅದರ ಪೂರ್ವ ಮತ್ತು ಪಶ್ಚಿಮ ಉಪನಗರಗಳಲ್ಲಿ ಕ್ರಮವಾಗಿ 48.49 ಮಿಮೀ, 66.99 ಮಿಮೀ ಮತ್ತು 48.99 ಮಿಮೀ ಮಳೆ ದಾಖಲಾಗಿದೆ.
ಬೆಲಾಪುರದಲ್ಲಿ 168 ಮಿ.ಮೀ ಮಳೆ (ಕಳೆದ ಆರು ಗಂಟೆಗಳಲ್ಲಿ 152 ಮಿ.ಮೀ), ಚೆಂಬೂರ್ ಮತ್ತು ಮುಂಬೈ ಸೆಂಟ್ರಲ್ ಕ್ರಮವಾಗಿ 125 ಮಿ.ಮೀ ಮತ್ತು 112 ಮಿ.ಮೀ. ವರ್ಲಿ ಮತ್ತು ಮಾಲ್ವಾನಿ ಪ್ರದೇಶಗಳು ತಲಾ 105 ಮಿ.ಮೀ.ಗಳನ್ನು ದಾಖಲಿಸಿದೆ.
ಮುಂಬೈನ ಹಲವಾರು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದೆ. ಕಿಂಗ್ ಸರ್ಕಲ್‌ನ ಗಾಂಧಿ ಮಾರುಕಟ್ಟೆ ಪ್ರದೇಶ, ಸಿಯಾನ್ ಮತ್ತು ವಿಲೇ ಪಾರ್ಲೆಯ ಮಿಲನ್ ಸುರಂಗಮಾರ್ಗ ಜಲಾವೃತಗೊಂಡಿದೆ.