ಅಲಿಗಢ (ಉತ್ತರ ಪ್ರದೇಶ): ಜನ ವಾಸದ ಹಲವು ವಿಶಿಷ್ಟ ಮನೆಗಳ ಬಗ್ಗೆ ನೀವು ಕೇಳಿರಬಹುದು ಮತ್ತು ನೋಡಿರಬಹುದು. ಆದರೆ, ಪಕ್ಷಿಗಳೇ ವಾಸಿಸಲೆಂದು ಮನೆಗಳು ಇರುತ್ತವೆ ಎಂಬುದನ್ನು ಕೇಳಿರುವುದಿಲ್ಲ. 60 ಅಡಿ ಎತ್ತರ, 7 ಅಂತಸ್ತಿನ ಆ ಮನೆಯಲ್ಲಿ ವರ್ಣರಂಜಿತವಾದ 512 ಫ್ಲಾಟ್ಗಳಿವೆ. ಇದು ಬರ್ಡ್ ಹೌಸ್ ಅಥವಾ ಟವರ್ ಎಂದೇ ಖ್ಯಾತಿ ಪಡೆದಿದೆ. ಇಂತಹದೊಂದು ವಿಶಿಷ್ಟ ಮನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಿರ್ಮಾಣವಾಗಿದೆ.
ಸಾಮಾನ್ಯವಾಗಿ ಜನತೆ ತಮ್ಮ ಹೆತ್ತವರ ನೆನಪಿಗಾಗಿ ಧರ್ಮಶಾಲೆ, ಛತ್ರಗಳು ಇತ್ಯಾದಿಗಳನ್ನು ನಿರ್ಮಿಸುತ್ತಾರೆ. ಆದರೆ, ಕೆಲ ಪರಿಸರ ಪ್ರೇಮಿಗಳು ತಮ್ಮ ಪೋಷಕರ ನೆನಪಿನಲ್ಲಿ ಪಕ್ಷಿಗಳಿಗಾಗಿ ಈ ಬರ್ಡ್ ಹೌಸ್ ಕಟ್ಟಿಸಿದ್ದಾರೆ. ಬಣ್ಣ-ಬಣ್ಣದ ಕೋಣೆಗಳನ್ನು ಹೊಂದಿರುವ ಆಕರ್ಷಕವಾದ ಪಕ್ಷಿಗಳ ಮನೆ ಸುತ್ತ-ಮುತ್ತಲಿನ ಪ್ರದೇಶದ ಜನರ ಗಮನ ಸೆಳೆಯುತ್ತಿದೆ. ಸಾಕಷ್ಟು ಚರ್ಚೆಯ ವಿಷಯವೂ ಆಗಿದೆ.
60 ಅಡಿ ಎತ್ತರ - 7 ಲಕ್ಷ ರೂ. ವೆಚ್ಚ: ಅಲಿಗಢ ಜಿಲ್ಲೆಯ ಇಗ್ಲಾಸ್ ಸಮೀಪದ ದುಮೇದಿ ಗ್ರಾಮದ ನಿವಾಸಿಗಳಾದ ದೇವಕಿನಂದನ್ ಶರ್ಮಾ, ರಾಮ್ನಿವಾಸ್ ಶರ್ಮಾ, ರಾಮ್ಹರಿ ಶರ್ಮಾ ಮತ್ತು ಮುನೇಶ್ ಶರ್ಮಾ ಎಂಬ ಪರಿಸರ ಪ್ರೇಮಿಗಳೇ ಈ ವಿಶಿಷ್ಟವಾದ ಬರ್ಡ್ ಹೌಸ್ ನಿರ್ಮಿಸಿದ್ದಾರೆ. ತಮ್ಮ ಹೆತ್ತವರ ನೆನಪಿನಲ್ಲಿ ಸಮಾಜಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಲು ಬಯಸಿದ್ದ ಇವರು, ಕುಸಿಯುತ್ತಿರುವ ಪಕ್ಷಿಗಳ ಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ಮಾದರಿ ಹಾಗೂ ವಿನೂತನವಾದ ಕ್ರಮವನ್ನು ಕೈಗೊಂಡಿದ್ದಾರೆ.
ಗ್ರಾಮದ ಸುತ್ತ-ಮುತ್ತಲು ಪಕ್ಷಿಗಳು ಉಳಿವಿಗಾಗಿ ಅವುಗಳಿಗೆಂದು ಪಕ್ಷಿಗಳ ಗೋಪುರ ಕಟ್ಟಿಸಿದ್ದಾರೆ. ರಾಜಸ್ಥಾನದ ಕುಶಲಕರ್ಮಿಗಳನ್ನು ಸಂಪರ್ಕಿಸಿ, ಅವರನ್ನು ಗ್ರಾಮಕ್ಕೆ ಕರೆಸಿ ಈ ವಿಶಿಷ್ಟವಾದ ಮನೆ ತಲೆ ಎತ್ತಲು ಕಾರಣವಾಗಿದ್ದಾರೆ. 60 ಅಡಿ ಎತ್ತರವಿರುವ ಗೋಪುರವು ಪಕ್ಷಿಗಳು ಹಾಗೂ ಜನರನ್ನೂ ಸೂಜಿಗಲ್ಲಿನಂತೆ ಆಕರ್ಷಿಸುತ್ತಿದೆ. ಇದಕ್ಕಾಗಿ ಅವರು ಸುಮಾರು 7 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾರೆ.
512 ವರ್ಣರಂಜಿತ ಫ್ಲಾಟ್ಗಳು: 60 ಅಡಿ ಎತ್ತರ ಇರುವ ಪಕ್ಷಿಗಳ ಟವರ್ಅನ್ನು 7 ಅಂತಸ್ತಿನ ಮಾದರಿಯಲ್ಲಿ ಕಟ್ಟಲಾಗಿದೆ. ಪ್ರತಿ ಋತುವಿನಲ್ಲಿ ಪಕ್ಷಿಗಳ ಸುರಕ್ಷತೆಗೆ ಸೂಕ್ತವಾದ ರೀತಿಯಲ್ಲಿ 512 ಗೂಡು ಅಥವಾ ಫ್ಲಾಟ್‌ಗಳನ್ನೂ ನಿರ್ಮಿಸಲಾಗಿದೆ. ಪ್ರತಿ ಅಂತಸ್ತು ಹಾಗೂ ಗೂಡಿಗೆ ವಿವಿಧ ಬಣ್ಣಗಳನ್ನು ಬಳಯಲಾಗಿದೆ. ಪಕ್ಷಿಗಳು ಸುಲಭವಾಗಿ ವಾಸಿಸುವಂತೆ ಇದರ ನಿರ್ಮಾಣ ಇದೆ.
ನಮ್ಮ ಹೆತ್ತವರಾದ ದ್ವಾರಕಾ ಪ್ರಸಾದ್ ಮತ್ತು ಶಾಂತಿ ದೇವಿ ಅವರ ನೆನಪಿನಲ್ಲಿ ಹೊಸದಾಗಿ ಏನಾದರೂ ಮಾಡಬೇಕೆಂಬ ಅಭಿಲಾಸೆ ಇತ್ತು. ಈ ನಿಟ್ಟಿನಲ್ಲಿ ಸಹೋದರಾದ ರಾಮ್ಹರಿ ಶರ್ಮಾ, ಮುನೇಶ್ ಶರ್ಮಾ ಅವರೊಂದಿಗೆ ಚರ್ಚೆ ನಡೆಸಲಾಗುತ್ತಿತ್ತು. ಇದೇ ವೇಳೆ, ಗ್ರಾಮದ ಸಮೀಪದ ಬೃಹತ್ ಉದ್ಯಾನವನವನ್ನು ಕತ್ತರಿಸಿರುವುದು ತಮ್ಮ ಗಮನಕ್ಕೆ ಬಂತು. ಇದರಿಂದ ಉದ್ಯಾನದಲ್ಲಿ ವಾಸಿಸುತ್ತಿದ್ದ ಪಕ್ಷಿಗಳು ತೊಂದರೆಗೆ ಒಳಗಾಗಿದ್ದವು. ಜೊತೆಗೆ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಗಮನದಲ್ಲಿ ಇಟ್ಟುಕೊಂಡು ಪಕ್ಷಿಗಳ ಗೋಪುರ ನಿರ್ಮಿಸಲು ತೀರ್ಮಾನಿಸಲಾಯಿತು. 2021ರ ನವೆಂಬರ್ನಲ್ಲಿ ಇದರ ಕಾಮಗಾರಿ ಪೂರ್ಣಗೊಂಡಿದೆ ಎಂದು ದೇವಕಿನಂದನ್ ಮತ್ತು ರಾಮ್ನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ: 1998ರಿಂದಲೂ ಮಳೆಗಾಲದ 4 ತಿಂಗಳು ಗಿಳಿಗಳಿಗೆ ಆಹಾರ ನೀಡುತ್ತಿರುವ ಪಕ್ಷಿಪ್ರೇಮಿ ಕುಟುಂಬ