ಸೂರತ್ (ಗುಜರಾತ್): ಪೀಠೋಪಕರಣ ಉದ್ಯಮಿಯ ಕುಟುಂಬದ ಏಳು ಜನರು ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಗುಜರಾತ್ನ ಸೂರತ್ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಮೃತರಲ್ಲಿ ಉದ್ಯಮಿ, ಅವರ ತಂದೆ, ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಸೇರಿದ್ದು, ಸ್ಥಳದಲ್ಲಿ ಡೆತ್ನೋಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂರತ್‌ನ ಪಾಲನ್‌ಪುರ್ ಪಾಟಿಯಾ ಪ್ರದೇಶದ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿ ಈ ದುರಂತ ನಡೆದಿದೆ. ಪೀಠೋಪಕರಣ ಉದ್ಯಮಿಯಾದ ಮನೀಶ್ ಭಾಯ್ ಸೋಲಂಕಿ ಎಂಬುವರ ಕುಟುಂಬ ದಾರುಣ ಅಂತ್ಯ ಕಂಡಿದೆ. ನಿನ್ನೆ ರಾತ್ರಿ ಇಡೀ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಮನೀಶ್ ಸೋಲಂಕಿ, ಇವರ ತಂದೆ ಕಾನುಭಾಯಿ, ತಾಯಿ ಶೋಭನಾಬೆನ್, ಪತ್ನಿ ರೀಟಾ ಹಾಗೂ ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಮಗ ಎಂದು ಗುರುತಿಸಲಾಗಿದೆ.
ಮನೀಶ್ ಮೊದಲಿಗೆ ತನ್ನ ಹೆತ್ತವರು, ಹೆಂಡತಿ ಮತ್ತು ಮೂವರು ಮಕ್ಕಳಿಗೆ ವಿಷಕಾರಿ ಔಷಧ ನೀಡಿದ್ದಾರೆ. ಈ ಆರು ಜನರ ಮೃತಪಟ್ಟ ನಂತರ ಅವರು ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಡೆತ್ನೋಟ್ ಸಿಕ್ಕಿದೆ. ಸದ್ಯ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಒಂದೇ ಕುಟುಂಬದ ಏಳು ಜನರ ಸಾಮೂಹಿಕ ಆತ್ಮಹತ್ಯೆ ಘಟನೆ ಇಡೀ ರಾಜ್ಯದಲ್ಲಿ ಆತಂಕ ಮೂಡಿಸಿದೆ.
ಮನೀಶ್‌ಭಾಯ್ ಪೀಠೋಪಕರಣ ವ್ಯವಹಾರ ನಡೆಸುತ್ತಿದ್ದರು. ಯಾರೋ ಒಬ್ಬರಿಗೆ ಹಣ ಕೊಟ್ಟಿದ್ದರು. ಈ ಹಣ ವಾಪಸ್ ಬರುವ ಲಕ್ಷಣ ಇರಲಿಲ್ಲ. ಇದರಿಂದ ಮನನೊಂದ ಮನೀಶ್‌ಭಾಯ್ ನಿನ್ನೆ ರಾತ್ರಿ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೊಟ್ಟ ಹಣ ವಾಪಸ್ ಸಿಗದ ಕಾರಣ ಈ ಕಠಿಣ ನಿರ್ಧಾರಕ್ಕೆ ಕೈಗೊಂಡಿರುವುದಾಗಿ ಎಂದು ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಫರ್ನಿಚರ್ ಉದ್ಯಮಿಯಾಗಿದ್ದ ಮನೀಶ್ ತಮ್ಮ ಸೂಸೈಡ್ ನೋಟ್‌ನಲ್ಲಿ ಅನೇಕರು ಹಣ ನೀಡಿಲ್ಲ ಮತ್ತು ಹಲವರಿಗೆ ತಾವು ಹಣ ನೀಡಬೇಕಾಗಿದೆ ಎಂದು ಬರೆದಿದ್ದಾರೆ. ಆದರೆ, ತಮ್ಮ ಒಂದು ಪುಟದ ಈ ನೋಟ್‌ನಲ್ಲಿ ಯಾರ ಹೆಸರನ್ನೂ ಬರೆದಿಲ್ಲ. ಮನೆಯಿಂದ ವಿಷದ ವಾಸನೆ ಬಂದ ಕಾರಣ ಅಕ್ಕ-ಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ಬಡಿದಿದ್ದಾರೆ. ಆದರೆ, ಬಾಗಿಲು ತೆರೆಯದೇ ಇದ್ದಾಗ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ ಎಂದು ಡಿಸಿಪಿ ರಾಕೇಶ್ ಬರೋಟ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೋಟೆಲ್ನಲ್ಲಿ ಮಧ್ಯಾಹ್ನ ಚೆಕ್ ಇನ್ ಆಗಿದ್ದ ಪುರುಷ, ಮಹಿಳೆ ರಾತ್ರಿ ವೇಳೆಗೆ ಶವವಾಗಿ ಪತ್ತೆ