ಕೊಲ್ಕತ್ತಾ(ಪಶ್ಚಿಮ ಬಂಗಾಳ): ಇಲ್ಲಿನ ಪ್ರಾಥಮಿಕ ಶಿಕ್ಷಣ ಮಂಡಳಿಯು ಐದು ವರ್ಷಗಳ ನಂತರ ಇಂದು ಬಿಗಿ ಭದ್ರತೆಯ ನಡುವೆ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ) ನಡೆಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಸರ್ಕಾರಿ ಪ್ರಾಯೋಜಿತ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಕರ ನೇಮಕಾತಿಗೆ ಸುಮಾರು 11,000 ಖಾಲಿ ಹುದ್ದೆಗಳಿದ್ದು, ಅವುಗಳನ್ನು ಭರ್ತಿ ಮಾಡಲು ಈ ಪರೀಕ್ಷೆ ನಡೆಸಲಾಗುತ್ತಿದೆ. ಸುಮಾರು ಏಳು ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ.
ಅಲ್ಲದೇ, ಅಭ್ಯರ್ಥಿಗಳ ಸುಗಮ ಪ್ರಯಾಣಕ್ಕಾಗಿ ರಾಜ್ಯ ಸಾರಿಗೆ ಇಲಾಖೆ ಮತ್ತು ಮೆಟ್ರೋ ರೈಲ್ವೆ ಹೆಚ್ಚುವರಿ ಸೇವೆಗಳಿಗೆ ವ್ಯವಸ್ಥೆ ಮಾಡಿದೆ. ರಾಜ್ಯದಾದ್ಯಂತ 1,460 ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದೆ. 2017 ರಲ್ಲಿ ನಡೆದ ಟಿಇಟಿ ಪರೀಕ್ಷೆಯು ಇದೀಗ 5 ವರ್ಷಗಳ ಬಳಿಕ ನಡೆಯುತ್ತಿದೆ.
2014ರಲ್ಲಿ ಟಿಇಟಿ ಫಲಿತಾಂಶದ ಮೇರೆಗೆ ಶಿಕ್ಷಕರ ನೇಮಕಾತಿಯು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಕೊಲ್ಕತ್ತಾ ಹೈಕೋರ್ಟ್ ಈ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ಆದೇಶಿಸಿತ್ತು. ಅದರಂತೆ ತನಿಖೆ ನಡೆಯುತ್ತಿದ್ದು, ಎರಡು ತಿಂಗಳ ಹಿಂದೆ ರಾಜ್ಯ ಪ್ರಾಥಮಿಕ ಶಿಕ್ಷಣ ಮಂಡಳಿಯ ಮಾಜಿ ಅಧ್ಯಕ್ಷ ಮತ್ತು ರಾಜ್ಯ ಕಾಂಗ್ರೆಸ್ ಶಾಸಕ ಮಾಣಿಕ್ ಭಟ್ಟಾಚಾರ್ಯ ಅವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ:ಕೋಲ್ಕತ್ತಾ: ಪ್ರತಿಭಟನಾ ನಿರತ ಟಿಇಟಿ ಅಭ್ಯರ್ಥಿಗಳ ಬಂಧನ, ನಿಷೇಧಾಜ್ಞೆ ಜಾರಿ