ಮಹೋಬಾ (ಉತ್ತರ ಪ್ರದೇಶ) : ಯುವತಿ ಮೇಲಿನ ಕಿರುಕುಳ ನಿಲ್ಲಿಸುವಂತೆ ಯುವಕನಿಗೆ ಹುಡುಗಿಯ ಕುಟುಂಬಸ್ಥರು ಹೇಳಿದ್ದರಿಂದ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರ ಪ್ರದೇಶದ ಮಹೋಬಾದಲ್ಲಿ ನಡೆದಿದೆ. ಯುವಕ ಮತ್ತು ಆತನ ತಂದೆ ಗುಂಡು ಹಾರಿಸಿದ್ದರಿಂದ ಉತ್ತರ ಪ್ರದೇಶದ ಮಹೋಬಾದ ಕುಟುಂಬದ ಏಳು ಸದಸ್ಯರು ಗಾಯಗೊಂಡಿದ್ದಾರೆ. ಈ ಹಿಂದೆ ತಮ್ಮ ಮಗಳಿಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಹುಡುಗಿಯ ಮನೆಯವರು ನಿಂದಿಸಿದ್ದರು. ಪನ್ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯ ಹಿನ್ನೆಲೆ?: ಅದೇ ಗ್ರಾಮದ ಜಿತೇಂದ್ರ ತಿವಾರಿ ಎಂಬ ಯುವಕ ಕಾಲೇಜಿಗೆ ಹೋಗುತ್ತಿದ್ದ ಹುಡುಗಿಗೆ ಕಿರುಕುಳ ನೀಡುತ್ತಿದ್ದ. ನಿತ್ಯ ಕಿರುಕುಳದಿಂದ ಬೇಸತ್ತ ಬಾಲಕಿ ತನ್ನ ತಂದೆಗೆ ಮಾಹಿತಿ ನೀಡಿದ್ದಳು. ಎರಡು ದಿನಗಳ ಹಿಂದೆ ಯುವತಿಯ ತಂದೆ ಜಿತೇಂದ್ರನ ತಂದೆ ನರೇಂದ್ರ ತಿವಾರಿ ಅವರಿಗೆ ದೂರು ನೀಡಲು ಯುವಕನ ಮನೆಗೆ ಹೋಗಿದ್ದರು. ಇದರಿಂದ ಕೋಪಗೊಂಡ ಜಿತೇಂದ್ರ ನಿನ್ನೆ ಸಂಜೆ ಬಾಲಕಿಯ ಮನೆಗೆ ಬಂದಿದ್ದಾನೆ. ಮನೆಯ ಹೊರಗೆ ನಿಂತು ಕುಟುಂಬದವರನ್ನು ನಿಂದಿಸಿದ್ದಾನೆ.
ನಂತರ ಬೈಕ್ನಲ್ಲಿ ಹಲವು ಬಾರಿ ಮನೆ ಸುತ್ತಿದ್ದಾನೆ. ಆಗ ಹುಡುಗಿಯ ಮನೆಯವರು ಅವನನ್ನು ಗದರಿಸಿ ಕಳುಹಿಸಿದ್ದಾರೆ. ಆದರೆ ಆತ ಪಿಸ್ತೂಲ್ ತೆಗೆದುಕೊಂಡು ಗುಂಡು ಹಾರಿಸಲು ಪ್ರಯತ್ನಿಸಿದ್ದಾನೆ. ಈ ವೇಳೆ, ಕುಟುಂಬದ ಸದಸ್ಯರು ಅವನಿಂದ ಪಿಸ್ತೂಲ್ ಕಸಿದುಕೊಂಡಿದ್ದಾರೆ. ಘಟನೆಯ ಬಗ್ಗೆ ತಿಳಿದ ನಂತರ ಅವನ ತಂದೆ ನರೇಂದ್ರ ತನ್ನ ಪರವಾನಗಿ ಪಡೆದ ಗನ್‌ನೊಂದಿಗೆ ಸ್ಥಳಕ್ಕಾಗಮಿಸಿ ಹುಡುಗಿಯ ಮನೆಯವರಿಗೆ ಏನೂ ಅರ್ಥವಾಗುವ ಮೊದಲೇ ಗುಂಡು ಹಾರಿಸಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದಾನೆ.
ಈ ಅವಘಡದಿಂದ ಬಾಲಕಿಯ ತಂದೆ, ಅಜ್ಜಿ, ಚಿಕ್ಕಪ್ಪ, ಚಿಕ್ಕಮ್ಮ ಮತ್ತು ಕುಟುಂಬದ ಇತರ ಮೂವರಿಗೆ ಗುಂಡಿನ ದಾಳಿ ವೇಳೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು, ಮಹೋಬ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ತನಿಖೆ ಪ್ರಾರಂಭಿಸಿದ್ದಾರೆ.
ನಿತ್ಯ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಯುವಕರು ತಡೆದು ಕಿರುಕುಳ ನೀಡುತ್ತಿದ್ದರು ಎಂಬುದಾಗಿ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಯುವಕ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂಬ ವಿಚಾರವೂ ಬಹಿರಂಗವಾಗಿದೆ. ಅಷ್ಟೇ ಅಲ್ಲ ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂಬ ವಿಚಾರ ಸಹ ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಘಟನೆ ಬಗ್ಗೆ ಎಸ್ಪಿ ಮಾಹಿತಿ: "ಏಳು ಗಾಯಾಳುಗಳಿಗೆ ಮಹೋಬಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಮತ್ತು ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಗಾಯಗೊಂಡ ಕುಟುಂಬದಿಂದ ಇದುವರೆಗೆ ಯಾವುದೇ ದೂರು ಬಂದಿಲ್ಲ" ಎಂದು ಮಹೋಬಾ ಪೊಲೀಸ್ ವರಿಷ್ಠಾಧಿಕಾರಿ ಅಪರ್ಣಾ ಗುಪ್ತಾ ಹೇಳಿದ್ದಾರೆ.
ಇದನ್ನೂ ಓದಿ: 6 ವರ್ಷಗಳಿಂದ ಮಗಳಿಗೆ ಲೈಂಗಿಕ ಕಿರುಕುಳ ನೀಡಿದ ತಂದೆಯ ಬಂಧನ...