ಜಮ್ಮು ಮತ್ತು ಕಾಶ್ಮೀರ: ಇಲ್ಲಿನ ಮೊಘಲ್ ರಸ್ತೆಯಲ್ಲಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಹಿರಿಯ ಅಧಿಕಾರಿ, ಅವರ ಪತ್ನಿ ಮತ್ತು ಮಗ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಣಕಾಸು, ಅರಣ್ಯ ಪರಿಸರ ಇಲಾಖೆಯ ನಿರ್ದೇಶಕ ರಣಬೀರ್ ಸಿಂಗ್ ಬಾಲಿ, ಪತ್ನಿ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗಳು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮ್ಮು ಕಣಿವೆಯಿಂದ ಸುರನಕೋಟೆಗೆ ತೆರಳುತ್ತಿದ್ದ ಕಾರು ಕಮರಿಗೆ ಬಿದ್ದು ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮುಂಬೈನಲ್ಲಿ 4 ವಾಹನಗಳಿಗೆ ಟ್ರಕ್ ಡಿಕ್ಕಿ: ಮುಂಬೈನ ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯ ಚುನಾಭಟ್ಟಿ ಬಳಿ ಭಾನುವಾರ ಟ್ರಕ್‌ವೊಂದು ನಾಲ್ಕು ವಾಹನಗಳಿಗೆ ಡಿಕ್ಕಿ ಹೊಡೆದು ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತನನ್ನು ಅಬ್ದುಲ್ ಶೇಖ್ ಎಂದು ಗುರುತಿಸಲಾಗಿದೆ. ಸೂರಜ್ ಸಿಗ್ವಾನ್ ಮತ್ತು ಅಬ್ದುಲ್ ವಾಹಿದ್ ಸಿದ್ದಿಕಿ ಗಾಯಾಳುಗಳಾಗಿದ್ದಾರೆ. ಮುಂಬೈನ ಸಯಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ರೈಲು ಹಳಿ ದಾಟುವಾಗ ರೈಲು ಡಿಕ್ಕಿ, ಇಬ್ಬರು ಸಾವು: ಹೊರ ದೆಹಲಿಯ ನಂಗ್ಲೋಯ್ ರೈಲು ನಿಲ್ದಾಣದ ಬಳಿ ರೈಲು ಹಳಿಗಳನ್ನು ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಶನಿವಾರ ಬೆಳಗ್ಗೆ 8:45ಕ್ಕೆ ಹಳಿಯಲ್ಲಿ ಪತ್ತೆಯಾದ ಇಬ್ಬರ ಶವಗಳ ಬಗ್ಗೆ ದೆಹಲಿ ಪೊಲೀಸರಿಗೆ ಪಿಸಿಆರ್ ಕರೆ ಬಂದಿತ್ತು ಎಂದು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಕಾರ್ಗೋ ವ್ಯಾನ್ ಪಲ್ಟಿ, ಇಬ್ಬರು ಸಾವು: ಕಾರ್ಗೋ ವ್ಯಾನ್ ವಾರದ ಮಾರುಕಟ್ಟೆಗೆ ತೆರಳುತ್ತಿದ್ದಾಗ ಬಿಸ್ವಾನಾಥ್ನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಪ್ರಯಾಣಿಕರಲ್ಲಿ ಒಬ್ಬರಾದ ಮುಜಾಹಿದುಲ್ ಇಸ್ಲಾಂ ಸ್ಥಳದಲ್ಲೇ ಸಾವನ್ನಪ್ಪಿದರೆ, ಇತರ ಪ್ರಯಾಣಿಕರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಮತ್ತೋರ್ವನೂ ಕೊನೆಯುಸಿರೆಳೆದಿದ್ದಾನೆ. ಇನ್ನುಳಿದ ಐವರು ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಅಪಘಾತ, ಇಬ್ಬರು ಸಾವು: ಎರಡು ದ್ವಿಚಕ್ರ ವಾಹನಗಳಿಗೆ ಟೆಂಪೋ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಾಚಹಳ್ಳಿ ಗ್ರಾಮದ ಬಳಿ ಭಾನುವಾರ ನಡೆದಿದೆ. ಬೈಕ್, ಸ್ಕೂಟಿ ಹಾಗೂ ಟೆಂಪೋ ನಡುವೆ ಸರಣಿ ಅಪಘಾತ ನಡೆದಿದೆ. ಬೆಂಕಿ ಕಾಣಿಸಿಕೊಂಡು ಟೆಂಪೋ ಹಾಗು ಬೈಕ್ ಸುಟ್ಟು ಕರಕಲಾಗಿವೆ. ದ್ವಿಚಕ್ರದಲ್ಲಿ ತೆರಳುತ್ತಿದ್ದ ದಂಪತಿ ಕುರುಬೂರು ಗ್ರಾಮದ ಶ್ಯಾಮಲಾ (30), ಶ್ರೀರಾಮ್ (35) ಮೃತಪಟ್ಟಿದ್ದಾರೆ. ಮೂವರು ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ವಿಜಯಪುರ: ಕ್ರೂಸರ್ ವಾಹನ ಪಲ್ಟಿಯಾಗಿ ಇಬ್ಬರು ಸಾವು, ಇನ್ನಿಬ್ಬರು ಗಂಭೀರ