ಕೋಝಿಕ್ಕೋಡ್(ಕೇರಳ): ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಆರ್ಯಾದನ್ ಮುಹಮ್ಮದ್ (87) ಕೋಝಿಕ್ಕೋಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಆರೋಗ್ಯ ಸಮಸ್ಯೆಯಿಂದಾಗಿ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 1977ರಿಂದ 2011ರವರೆಗೆ ಎಂಟು ಬಾರಿ ನಿಲಂಬೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು.
ಟ್ರೇಡ್ ಯೂನಿಯನ್ ಚಟುವಟಿಕೆಗಳ ಮೂಲಕ ರಾಜಕೀಯ ಪ್ರವೇಶಿಸಿದ ಆರ್ಯಾದನ್ ಮುಹಮ್ಮದ್ ಮೂರು ಸಚಿವರಾಗಿ ಗುರುತಿಸಿಕೊಂಡಿದ್ದರು. 1935 ರಲ್ಲಿ ನಿಲಂಬೂರಿನಲ್ಲಿ ಜನಿಸಿದ ಆರ್ಯಾದನ್ ಮುಹಮ್ಮದ್ 1952 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು, 1958 ರಿಂದ ಕೆಪಿಸಿಸಿ ಸದಸ್ಯರಾಗಿದ್ದರು. ಅವರು ಕೋಝಿಕ್ಕೋಡ್ ಮತ್ತು ಮಲಪ್ಪುರಂ ಜಿಲ್ಲೆಗಳ ಡಿಸಿಸಿ ಅಧ್ಯಕ್ಷ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸ್ಥಾನಗಳನ್ನು ಅಲಂಕರಿಸಿದ್ದರು. ಐಎನ್‌ಟಿಯುಸಿಯ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಯಾಗಿದ್ದರು.
1977ರಲ್ಲಿ ನಿಲಂಬೂರಿನಿಂದ ಮೊದಲ ಬಾರಿಗೆ ವಿಧಾನಸಭೆಗೆ ಗೆದ್ದ ಆರ್ಯಾದನ್ ಮುಹಮ್ಮದ್ ಅವರು 1980, 1987, 1991, 1996, 2001, 2006 ಮತ್ತು 2011 ರಲ್ಲಿ ನಿಲಂಬೂರಿನಿಂದ ಗೆದ್ದು, ಎಂಟು ಬಾರಿ ಶಾಸಕರಾಗಿದ್ದರು.
1980ರಲ್ಲಿ ನಾಯನಾರ್ ಅವರ ಸಂಪುಟದಲ್ಲಿ ಕಾರ್ಮಿಕ ಮತ್ತು ಅರಣ್ಯ ಸಚಿವರಾಗಿದ್ದ ಆರ್ಯದನ್ ಅವರು ಎ.ಕೆ.ಆಂಟನಿ ಅವರ ಸಂಪುಟದಲ್ಲಿ ಕಾರ್ಮಿಕ ಮತ್ತು ಪ್ರವಾಸೋದ್ಯಮ ಸಚಿವರಾಗಿದ್ದರು. ಉಮ್ಮನ್ ಚಾಂಡಿ ಅವರ ಸಂಪುಟದಲ್ಲಿ ವಿದ್ಯುತ್ ಇಲಾಖೆಯನ್ನು ನಿಭಾಯಿಸಿದ್ದರು. ಯುಡಿಎಫ್ ಸದಸ್ಯನಾಗಿದ್ದರೂ ಮಲಪ್ಪುರಂನಲ್ಲಿ ಮುಸ್ಲಿಂ ಲೀಗ್ ವಿರುದ್ಧ ಹೋರಾಡಿದ ಆರ್ಯಾದನ್ ಮಣಿಯದ ನಾಯಕ.
ನಿಲಂಬೂರು ಶಾಸಕ ಮತ್ತು ಸಿಪಿಎಂ ಮುಖಂಡ ಕೆ ಕುಂಜಾಲಿ ಹತ್ಯೆಯಲ್ಲಿ ಆರ್ಯಾದನ್ ಮುಹಮ್ಮದ್ ಪಾತ್ರವಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಕೊಲೆ ಪ್ರಕರಣದಿಂದ ಆರ್ಯಾದನ್ ಮುಹಮ್ಮದ್ ಅವರನ್ನು ರಕ್ಷಿಸಲು ಇಂದಿರಾಗಾಂಧಿ ಸೇರಿದಂತೆ ಮುಖಂಡರು ಮಧ್ಯಪ್ರವೇಶಿಸಿದ್ದರು ಎಂಬ ಆರೋಪವೂ ಇದೆ. ಪ್ರಕರಣದ ಮೊದಲ ಆರೋಪಿ ಆರ್ಯಾದನ್ ಮುಹಮ್ಮದ್ ಪ್ರಕರಣದಲ್ಲಿ ಭಾಗಿಯಾಗಿರುವುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ನಂತರ ನ್ಯಾಯಾಲಯದಿಂದ ಖುಲಾಸೆಗೊಳಿಸಲಾಯಿತು.
ಇದನ್ನೂ ಓದಿ: ಹಿರಿಯ ಕಾಂಗ್ರೆಸ್ ಮುಖಂಡ ಬಿ ಕೆ ಪುಟ್ಟಸ್ವಾಮಿ ನಿಧನಕ್ಕೆ ಡಿ ಕೆ ಶಿವಕುಮಾರ್ ಸಂತಾಪ