ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದ ಶಾಸಕರನ್ನು ಅನರ್ಹಗೊಳಿಸುವ ಮನವಿಯ ಮೇಲೆ ಯಾವುದೇ ಕ್ರಮ ಕೈಗೊಳ್ಳದಂತೆ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿರುವುದನ್ನು ಶಿವಸೇನೆ ಸೋಮವಾರ ಸ್ವಾಗತಿಸಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಸೇನಾ ಎಂಎಲ್‌ಸಿ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ಪರಬ್, ಹೊಸ ಸ್ಪೀಕರ್ ಅವರನ್ನು ಆಯ್ಕೆ ಮಾಡಲಾಗಿದೆ ಮತ್ತು ಶಾಸಕರ ಅನರ್ಹತೆ ಕುರಿತಾದ ಅರ್ಜಿಯ ಬಗ್ಗೆ ನಿರ್ಧಾರ ಕೈಗೊಳ್ಳಲು ಅವರಿಗೆ ಹಕ್ಕಿದೆ ಎಂದು ರಾಜ್ಯ ಶಾಸಕಾಂಗವು ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿತ್ತು. ಹೊಸ ಸ್ಪೀಕರ್ ಬಿಜೆಪಿಯಿಂದ ಬಂದವರಾಗಿದ್ದು, ಅವರಿಂದ ನಮಗೆ ನ್ಯಾಯ ಸಿಗುವ ಭರವಸೆ ಇರಲಿಲ್ಲ ಎಂದು ಹೇಳಿದರು.
ನಮ್ಮ ಮೂರು ಅರ್ಜಿಗಳ ವಿಚಾರಣೆ ಮುಗಿಯುವವರೆಗೆ (ಉದ್ಧವ್ ಠಾಕ್ರೆ ಬಣದ ಶಾಸಕರ ಅನರ್ಹತೆ) ಈ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ನಾವು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಮಾಡಿದ್ದೆವು. ಅದರಂತೆ ಸುಪ್ರೀಂ ಕೋರ್ಟ್‌ನಲ್ಲಿ ಈ ಬಗ್ಗೆ ನಿರ್ಣಯ ಬರುವವರೆಗೂ ಸ್ಪೀಕರ್ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅಂದರೆ ಸ್ಪೀಕರ್ ಯಾವುದೇ ರೀತಿಯಲ್ಲೂ ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ಕಳೆದ ವಾರ, ಮಹಾರಾಷ್ಟ್ರ ಶಾಸಕಾಂಗ ಕಾರ್ಯದರ್ಶಿಯು ರಾಜ್ಯದ ಒಟ್ಟು 55 ಶಿವಸೇನೆ ಶಾಸಕರಲ್ಲಿ 53 ಮಂದಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದರು. ಏಕನಾಥ್ ಶಿಂಧೆ ನೇತೃತ್ವದ ಬಣದ 39 ಮತ್ತು ಉದ್ಧವ್ ಠಾಕ್ರೆ ಗುಂಪಿನ 14 ಶಾಸಕರಿಗೆ ನೋಟಿಸ್ ನೀಡಲಾಗಿತ್ತು. ಜುಲೈ 4 ರಂದು ಠಾಕ್ರೆ ಪಕ್ಷದ 14 ಶಾಸಕರಲ್ಲಿ ಒಬ್ಬರಾದ ಸಂತೋಷ್ ಬಂಗಾರ್ ಅವರು ಶಿಂಧೆ ಪಾಳಯಕ್ಕೆ ಸೇರಿದರು.
ಇದನ್ನು ಓದಿ: ಆದಿತ್ಯ ಠಾಕ್ರೆ ವಿರುದ್ಧ ಪ್ರಕರಣ ದಾಖಲಿಸಿ.. ರಾ.ಮ. ಹಕ್ಕುಗಳ ಆಯೋಗದಿಂದ ನಿರ್ದೇಶನ