ಮುಂಬೈ (ಮಹಾರಾಷ್ಟ್ರ): ಶಾಸಕರ ಅನರ್ಹತೆ ವಿಷಯವಾಗಿ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ಬಾಂಬೆ ಹೈಕೋರ್ಟ್ ಬುಧವಾರ ನೋಟಿಸ್ ಜಾರಿ ಮಾಡಿದೆ. ಠಾಕ್ರೆ ಬಣದ ಶಾಸಕರನ್ನು ಅನರ್ಹಗೊಳಿಸದಿರುವ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಸಲ್ಲಿಸಿದ ಅರ್ಜಿ ಸಂಬಂಧ ಈ ನೋಟಿಸ್ ನೀಡಲಾಗಿದೆ.
2022ರಲ್ಲಿ ಶಿವಸೇನೆ ಇಬ್ಭಾಗವಾಗಿ ಉದ್ಧವ್ ಠಾಕ್ರೆ ಹಾಗೂ ಏಕನಾಥ್ ಶಿಂಧೆ ನೇತೃತ್ವದ ಎರಡು ಬಣಗಳು ಉದ್ಭವಗೊಂಡಿದೆ. ಇದರ ನಂತರ ಎರಡೂ ಬಣಗಳು ಪರಸ್ಪರ ಶಾಸಕರ ವಿರುದ್ಧ ಅನರ್ಹತೆ ಸ್ಪೀಕರ್ಗೆ ಅರ್ಜಿಗಳನ್ನು ಸಲ್ಲಿಸಿದ್ದವು. ಏಕನಾಥ್ ಶಿಂಧೆ ಬಣದ 16 ಶಾಸಕರ ಅನರ್ಹತೆಗೆ ಉದ್ಧವ್ ಬಣ ಒತ್ತಾಯಿಸಿದ್ದರೆ, ಠಾಕ್ರೆ ಬಣದ 14 ಶಾಸಕರ ಸದಸ್ಯತ್ವ ಅಸಿಂಧುಗೊಳಿಸುವಂತೆ ಶಿಂಧೆ ಬಣ ಆಗ್ರಹಿಸಿತ್ತು. ಈ ಕುರಿತು ಜನವರಿ 10ರಂದು ತಮ್ಮ ತೀರ್ಪು ನೀಡಿರುವ ಸ್ಪೀಕರ್ ರಾಹುಲ್ ನಾರ್ವೇಕರ್ ಯಾವುದೇ ಬಣದ ಶಾಸಕರನ್ನು ಅನರ್ಹಗೊಳಿಸಿಲ್ಲ. ಆದರೆ, ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂದು ತೀರ್ಪು ನೀಡಿದ್ದಾರೆ.
ಮತ್ತೆ ಕಾನೂನು ಹೋರಾಟ: ಸ್ಪೀಕರ್ ತೀರ್ಪಿನ ನಂತರವೂ ಶಿವಸೈನಿಕರ ಎರಡೂ ಬಣಗಳು ಕಾನೂನು ಹೋರಾಟಕ್ಕೆ ಇಳಿದಿವೆ. ಉದ್ಧವ್ ಠಾಕ್ರೆ ಬಣದ 14 ಶಾಸಕರನ್ನು ಅನರ್ಹಗೊಳಿಸದಿರುವ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ಏಕನಾಥ್ ಶಿಂಧೆ ಬಣ ಬಾಂಬೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದೆ. ಸ್ಪೀಕರ್ ಆದೇಶವನ್ನು ಕಾನೂನು ಬಾಹಿರ ಎಂದು ಘೋಷಿಸಿ, ಅದನ್ನು ರದ್ದುಗೊಳಿಸಬೇಕು. ಠಾಕ್ರೆ ಬಣದ ಎಲ್ಲ 14 ಶಾಸಕರನ್ನು ಅನರ್ಹಗೊಳಿಸುವಂತೆ ಶಿಂಧೆ ಬಣದ ಮುಖ್ಯ ಸಚೇತಕ ಭರತ್ ಗೊಗವಾಲೆ ಮನವಿ ಮಾಡಿದ್ದಾರೆ.
ಬುಧವಾರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಗಿರೀಶ್ ಕುಲಕರ್ಣಿ ಮತ್ತು ಫಿರ್ದೋಶ್ ಪೂನಿವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ಈ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ಅಫಿಡವಿಟ್‌ಗಳನ್ನು ಸಲ್ಲಿಸುವಂತೆ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಮತ್ತು ಉದ್ಧವ್ ಠಾಕ್ರೆ ಬಣದ 14 ಶಾಸಕರಿಗೆ ಸೂಚಿಸಿ ನೋಟಿಸ್ ಜಾರಿ ಮಾಡಿದೆ. ಮುಂದಿನ ವಿಚಾರಣೆಯನ್ನು ಫೆಬ್ರವರಿ 8ಕ್ಕೆ ನ್ಯಾಯಪೀಠ ಮುಂದೂಡಿದೆ.
ಸುಪ್ರೀಂನಲ್ಲಿ ಠಾಕ್ರೆ ಬಣದ ಅರ್ಜಿ ವಿಚಾರಣೆ: ಮತ್ತೊಂದೆಡೆ, ಏಕನಾಥ್ ಶಿಂಧೆ ನೇತೃತ್ವದ ಬಣವೇ ನಿಜವಾದ ಶಿವಸೇನೆ ಎಂಬ ಸ್ಪೀಕರ್ ಆದೇಶದ ಬಗ್ಗೆ ಉದ್ಧವ್ ಠಾಕ್ರೆ ಬಣ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿಯನ್ನು ಬುಧವಾರ ನ್ಯಾಯಾಲಯ ಪುರಸ್ಕರಿಸಿದೆ.
ಸ್ಪೀಕರ್ ಆದೇಶಕ್ಕೆ ಮಧ್ಯಂತರ ತಡೆ ಕೋರಿ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಸೋಮವಾರ (ಜ.22ರಂದು) ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದೆ. ಠಾಕ್ರೆ ಬಣ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ.
ಇದನ್ನೂ ಓದಿ: ಶಿಂಧೆ ಬಣವೇ ನಿಜವಾದ ಶಿವಸೇನೆ, 16 ಶಾಸಕರ ಸದಸ್ಯತ್ವ ಸಿಂಧು: ಮಹಾರಾಷ್ಟ್ರ ಸ್ಪೀಕರ್ ತೀರ್ಪು