ನವದೆಹಲಿ: ಮಹಿಳೆಯರ ಸಮಸ್ಯೆಗಳನ್ನು ಪರಿಹಾರ ಮಾಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 33 ವರ್ಷದ ಸ್ವಯಂಘೋಷಿತ ದೇವಮಾನವ ವಿನೋದ್ ಕಶ್ಯಪ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈತ ತನ್ನ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿನ ಕಾಕ್ರೋಲಾ ಪ್ರದೇಶದಲ್ಲಿ ಆರೋಪಿ ವಿನೋದ್ ಕಶ್ಯಪ್ ಮಾತಾ ಮಸಾನಿ ಚೌಕಿ ದರ್ಬಾರ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದ. ಈತನ ವಿರುದ್ಧ ದ್ವಾರಕಾ ಉತ್ತರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಎರಡು ದೂರುಗಳು ದಾಖಲಾಗಿದ್ದವು. ಈ ಸಂಬಂಧ ಬಂಧಿಸಲಾಗಿದೆ ಎಂದು ದೆಹಲಿಯ ದ್ವಾರಕಾ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಹರ್ಷ ವರ್ಧನ್ ತಿಳಿಸಿದ್ದಾರೆ. ಅಲ್ಲದೇ, ಯೂಟ್ಯೂಬ್ ಚಾನೆಲ್ವೊಂದನ್ನು ನಡೆಸುತ್ತಿದ್ದ. ಚಾನೆಲ್ಗೆ ಹೆಚ್ಚಿನ ಫಾಲೋವರ್ಸ್ಗಳು ಕೂಡ ಇದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ವಿನೋದ್ ಕಶ್ಯಪ್ ವಿರುದ್ಧ ದಾಖಲಾದ ಎರಡೂ ಪ್ರಕರಣಗಳಲ್ಲಿ ತಮ್ಮ ಸಮಸ್ಯೆಗಳ ಪರಿಹಾರ ಹಾಗೂ ಸಹಾಯ ಮಾಡುವ ನೆಪದಲ್ಲಿ ಮಹಿಳಾ ಭಕ್ತರನ್ನು ಕರೆದು ಈ ಆರೋಪಿ ತನಗೆ 'ಗುರುಸೇವೆ' ಮಾಡಬೇಕು ಎಂದು ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ. ಇದರ ಬಳಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ. ಅಲ್ಲದೇ, ಈ ಕೃತ್ಯವನ್ನು ಬಹಿರಂಗಪಡಿಸದಂತೆ ಬೆದರಿಕೆ ಕೂಡ ಸಂತ್ರಸ್ತೆಯರಿಗೆ ಹಾಕಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಸದ್ಯ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ವಿನೋದ್ ಕಶ್ಯಪ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ವರ್ಧನ್ ಹೇಳಿದ್ದಾರೆ.
ಮಹಾರಾಷ್ಟ್ರದ ಇಬ್ಬರ 'ದೇವಮಾನವರ' ಸೆರೆ: ಕಳೆದ ಜುಲೈನಲ್ಲಿ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲೂ ಓರ್ವ ಸ್ವಯಂ ಘೋಷಿತ ದೇವಮಾನವನನ್ನು ಪೊಲೀಸರು ಬಂಧಿಸಿದ್ದರು. ದುಷ್ಟಶಕ್ತಿಗಳನ್ನು ತೊಡೆದುಹಾಕಲು ಸಹಾಯ ಮಾಡುವ ನೆಪದಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಆರೋಪಿಯನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದರು. ಸಂತ್ರಸ್ತ ಮಹಿಳೆಯ ದುರ್ಬಲತೆ ಮತ್ತು ದೌರ್ಬಲ್ಯ ಬಳಸಿಕೊಂಡು 2016ರಿಂದ ವಿವಿಧ ಸಂದರ್ಭಗಳಲ್ಲಿ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿತ್ತು.
ಇದಲ್ಲದೇ, ಮುಂಬೈನಲ್ಲೂ ಓರ್ವ ಸ್ವಯಂಘೋಷಿತ ದೇವಮಾನವನನ್ನು ಪೊಲೀಸರು ಸೆರೆ ಹಿಡಿದ್ದರು. ಧಾರ್ಮಿಕ ವಿಧಿವಿಧಾನಗಳ ಹೆಸರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 58 ವರ್ಷದ ಸುರೇಶ್ ಕುಮಾರ್ ರವೀಂದ್ರ ನಾರಾಯಣ್ ಅವಸ್ಥಿ ಎಂಬಾತನನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಯ ಮೇಲೆ 2019ರಿಂದ ಎಂದರೆ ಆಕೆ ಅಪ್ರಾಪ್ತಳಾಗಿದ್ದಾಗ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂಬ ದೂರಿನ ಮೇರೆಗೆ ಪೋಕ್ಸೋ ಕಾಯ್ದೆ ಅನ್ವಯ ಆರೋಪಿ ವಿರುದ್ಧ ಕೇಸ್ ದಾಖಲಾಗಿತ್ತು.
ಇದನ್ನೂ ಓದಿ: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸಿವಿಲ್ ಕಂಟ್ರಾಕ್ಟರ್ ಅರೆಸ್ಟ್