ಅಯೋಧ್ಯೆ (ಉತ್ತರ ಪ್ರದೇಶ): ಭವ್ಯ ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವ ಬಾಲರಾಮನ ವಿಗ್ರಹ ಆಯ್ಕೆ ಪ್ರಕ್ರಿಯೆಯನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮುಗಿಸಿದೆ. ನಿನ್ನೆ (ಶುಕ್ರವಾರ) ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಮೂರು ವಿಗ್ರಹಗಳ ಪೈಕಿ ಒಂದನ್ನು ಆರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಟ್ರಸ್ಟ್‌ನ ಬಿಮಲೇಂದ್ರ ಮೋಹನ್ ಪ್ರತಾಪ್ ಮಿಶ್ರಾ, ರಾಮಲಲ್ಲಾ ವಿಗ್ರಹ ಆಯ್ಕೆಗೆ ಮತದಾನ ಮುಗಿದಿದೆ. ಭವ್ಯ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವ ವಿಗ್ರಹವನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಮೂವರು ಶಿಲ್ಪಿಗಳು ಕೆತ್ತಿದ ಮೂರು ಮೂರ್ತಿಗಳಲ್ಲಿ ಒಂದನ್ನು ಆಯ್ಕೆ ಮಾಡಲು ಸರ್ವಸಮ್ಮತಿ ವ್ಯಕ್ತವಾಗಿದೆ. ಇದರಲ್ಲಿ ಒಬ್ಬರು ಕೆತ್ತಿದ ವಿಗ್ರಹವು ನಿಮ್ಮೊಂದಿಗೆ ಮಾತನಾಡುತ್ತದೆ. ನೀವು ಅದನ್ನು ಒಮ್ಮೆ ನೋಡಿದರೆ ಮಂತ್ರಮುಗ್ಧರಾಗುತ್ತೀರಿ ಎಂದು ಹೇಳಿದರು. ಆದರೆ, ಯಾರು ಕೆತ್ತಿದ ಮೂರ್ತಿಯನ್ನು ಆಯ್ಕೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ಹೊರಹಾಕಿಲ್ಲ.
ಹಲವು ವಿಗ್ರಹಗಳನ್ನು ಒಟ್ಟಿಗೆ ಇರಿಸಿದರೂ, ಕಣ್ಣುಗಳು ಅತ್ಯುತ್ತಮವಾದ ಮೂರ್ತಿಯ ಮೇಲೆ ಕೇಂದ್ರೀಕರಿಸುತ್ತವೆ. ಕಾಕತಾಳೀಯವೆಂದರೆ ಬೇರೆಲ್ಲರೂ ಒಪ್ಪಿದ ವಿಗ್ರಹವನ್ನು ನಾನೂ ಇಷ್ಟಪಟ್ಟೆ. ಅದಕ್ಕೆ ನನ್ನ ಮತವನ್ನೂ ನೀಡಿದ್ದೇನೆ. ಮತದಾನ ಪೂರ್ತಿಗೊಂಡಿದ್ದು, ಪ್ರಾಣ ಪ್ರತಿಷ್ಠಾಪನಾ ಮೂರ್ತಿ ಸಿದ್ಧವಾಗಿದೆ. ಆಯ್ಕೆ ಮಾಡಲಾದ ಮೂರ್ತಿಯು 51 ಇಂಚು ಎತ್ತರವಾಗಿದ್ದು, ಅತ್ಯುತ್ತಮ ದೈವತ್ವವನ್ನು ಹೊಂದಿದ್ದು, ಮಗುವಿನಂತೆ ಕಾಣುತ್ತದೆ ಎಂದು ಅವರು ತಿಳಿಸಿದರು.
ಕರ್ನಾಟಕದ ಶಿಲ್ಪಿಗಳ ವಿಗ್ರಹ ಆಯ್ಕೆ?: ಭವ್ಯ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳುವ ಬಾಲ ರಾಮನ ವಿಗ್ರಹಗಳ ಪೈಕಿ ಕರ್ನಾಟಕ ಶಿಲ್ಪಿಗಳಾದ ಮೈಸೂರು ಮೂಲದ ಅರುಣ್ ಯೋಗಿರಾಜ್ ಮತ್ತು ಉತ್ತರ ಕನ್ನಡದ ಗಣೇಶ್ ಭಟ್ ಅವರು ಕೆತ್ತಿದ ಮೂರ್ತಿ ಆಯ್ಕೆಯಾಗಿದೆ ಎಂದು ಹೇಳಲಾಗಿದೆ. ಇವರ ಪೈಕಿ ಯಾರ ಮೂರ್ತಿಗೆ ಹೆಚ್ಚಿನ ಮತಗಳು ಬಿದ್ದಿವೆ ಎಂಬ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.
ಅರುಣ್ ಯೋಗಿರಾಜ್ ಮತ್ತು ಗಣೇಶ್ ಭಟ್ ಅವರು ಕಾರ್ಕಳದ ಶಿಲೆಯಲ್ಲಿ ಬಾಲರಾಮನ ಮೂರ್ತಿಯನ್ನು ಕೆತ್ತಿದ್ದಾರೆ. ಇನ್ನೊಬ್ಬ ಶಿಲ್ಪಯಾದ ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಅವರು ರಾಜಸ್ಥಾನದ ಬಿಳಿಯ ಶಿಲೆಯಲ್ಲಿ ಮೂರ್ತಿ ಕೆತ್ತಿದ್ದಾರೆ. ರಾಮಲಲ್ಲಾನ ವಿಗ್ರಹ ಕೆತ್ತನೆಗೆ ಕರ್ನಾಟಕ ಹಾಗೂ ರಾಜಸ್ಥಾನದಿಂದ ಶಿಲೆಗಳನ್ನು ತರಲಾಗಿತ್ತು. ಟ್ರಸ್ಟ್‌ನ ಧಾರ್ಮಿಕ ಮಂಡಳಿಯು ಆಯ್ಕೆ ಮಾಡಿದ ಒಂದನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದರೆ, ಇನ್ನೆರಡನ್ನು ಮಂದಿರದ ಇತರ ಭಾಗಗಳಲ್ಲಿ ಇರಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ತಿಳಿಸಿದೆ.
ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಅದಕ್ಕೂ ಮೊದಲು 16 ರಿಂದ ಏಳು ದಿನಗಳ ಕಾಲ ಪೂಜಾ ವಿಧಿವಿಧಾನಗಳು ನಡೆಯಲಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೇರಿದಂತೆ ಐವರಿಗೆ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಟ್ರಸ್ಟ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಮೂರು ಮೂರ್ತಿ ಕೆತ್ತನೆ: ಯಾರು ರೂಪಿಸಿದ 'ಶ್ರೀರಾಮ'ನಿಗಿದೆ ಗರ್ಭಗುಡಿ ಸೇರುವ ಭಾಗ್ಯ?