ನವದೆಹಲಿ: ದೇಶದ್ರೋಹಕ್ಕೆ ಸಂಬಂಧಿಸಿದ ಸೆಕ್ಷನ್ 124 ಎ ಸಿಂಧುತ್ವದ ಕುರಿತಂತೆ ಕೇಂದ್ರ ಸರ್ಕಾರ ನಿಲುವು ಬದಲಿಸಿದ ಬೆನ್ನಲ್ಲೇ ಸುಪ್ರೀಂಕೋರ್ಟ್ ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನ ಮುಂದುವರೆಸಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ, ನ್ಯಾ. ಸೂರ್ಯ ಕಾಂತ್ ಮತ್ತು ನ್ಯಾ ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠವು 124 ಎ ಕಾನೂನು ಮರು ಪರಿಶೀಲನೆ ಅರ್ಜಿ ವಿಚಾರಣೆ ನಡೆಸುತ್ತಿದೆ.
ಇಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ನಾಳೆಯೊಳಗೆ ಕಾನೂನು ಮರುಪರಿಶೀಲನೆ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳಿದೆ. ಇದೇ ವೇಳೆ, ಕಾನೂನು ಮರುಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಪೀಠ ಪ್ರಶ್ನಿಸಿತು. ವಾದ ಮಂಡನೆ ಮಾಡಿದ ಸಾಲಿಸಿಟರ್ ಜನರಲ್, ನನಗೆ ನಿಖರವಾದ ಉತ್ತರವನ್ನು ನೀಡಲು ಸಾಧ್ಯವಾಗುತ್ತಿಲ್ಲ, ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು. ಆದರೆ ಇದೇ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ ಕಾನೂನು ದುರ್ಬಳಕೆ ಆಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿತು.
ನಾವು ಸ್ಪಷ್ಟವಾಗಿ ಹೇಳುತ್ತಿದ್ದೇವೆ. ನಮಗೆ ಸೂಚನೆಗಳು ಬೇಕಾಗಿವೆ. ನಾವು ನಿಮಗೆ ನಾಳೆಯವರೆಗೆ ಸಮಯ ನೀಡುತ್ತೇವೆ. ನಮ್ಮ ಕಾಳಜಿ ಇರುವುದು ಬಾಕಿ ಉಳಿದಿರುವ ಪ್ರಕರಣಗಳು ಮತ್ತು ಮುಂದಿನ ಪ್ರಕರಣಗಳನ್ನು ಸರ್ಕಾರ ಹೇಗೆ ನೋಡಿಕೊಳ್ಳುತ್ತದೆ ಎಂಬುದಾಗಿದೆ ಎಂದಿದೆ. ನೀವು ಕಾನೂನು ಮರು ಪರಿಶೀಲಿಸಿ ಮೂರ್ನಾಲ್ಕು ತಿಂಗಳು ಬೇಕಾಗಬಹುದೇ ಎಂದು ಪ್ರಶ್ನಿಸಿದ ನ್ಯಾಯಾಧೀಶರು ಕೇಂದ್ರ ಸರ್ಕಾರವಾಗಿ ನೀವು (ಕಾನೂನು ಮರುಪರಿಶೀಲನೆಗೆ) ಮನಸ್ಸು ಮಾಡುತ್ತಿರುವುದರಿಂದ ದೇಶದ್ರೋಹ ಕಾನೂನಿನಡಿ ಕ್ರಮ ಕೈಗೊಳ್ಳಬೇಡಿ ಎಂದು ರಾಜ್ಯಗಳಿಗೆ ಏಕೆ ಸೂಚಿಸುವುದಿಲ್ಲ? ಎಂದರು. ಈ ಕಾನೂನಿನಡಿ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ತಿಳಿಸಲು ಮತ್ತು ಕಾನೂನನ್ನು ಮರುಪರಿಶೀಲಿಸುವವರೆಗೆ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವಂತೆ ಪೀಠ ಕೇಂದ್ರ ಸರ್ಕಾವನ್ನು ಕೇಳಿದೆ.
ಕೇಂದ್ರ ದಿಢೀರ್ ನಿರ್ಧಾರ ಬದಲಾಯಿಸಿದ್ಧೇಕೆ?: ದೇಶದ್ರೋಹ ಕಾನೂನನ್ನು ಎತ್ತಿಹಿಡಿಯುವ ಕೇದಾರನಾಥ್ ಸಿಂಗ್ ವರ್ಸಸ್ ಬಿಹಾರ ಸರ್ಕಾರ ಪ್ರಕರಣದ ತೀರ್ಪು ಕ್ರಮಬದ್ಧವಾಗಿದೆ ಮತ್ತು ಅದನ್ನು ಮರುಪರಿಶೀಲಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್ಗೆ ಈ ಹಿಂದೆ ಹೇಳಿತ್ತು. ಆದರೆ, ಕೇಂದ್ರ ತನ್ನ ನಿಲುವು ಬದಲಿಸಿದೆ. ದೇಶದ್ರೋಹದ ಕಾನೂನಿನ ಸಿಂಧುತ್ವ ಎತ್ತಿಹಿಡಿದ ಕೇದಾರನಾಥ ತೀರ್ಪು ಸ್ಥಾಪಿತ ಕಾನೂನಾಗಿದೆ. ಇದನ್ನು ವಿಸ್ತೃತ ಪೀಠ ಹೊರತುಪಡಿಸಿ ಮೂವರು ಸದಸ್ಯರ ನ್ಯಾಯಪೀಠ ಮರುಪರಿಶೀಲಿಸುವ ಪ್ರಶ್ನೆಯೇ ಇಲ್ಲಿ ಉದ್ಭವಿಸುವುದಿಲ್ಲ ಎಂದು ಕೇಂದ್ರ ಅಭಿಪ್ರಾಯಪಟ್ಟಿತ್ತು.
ಏನಿದು ಕಾನೂನು?:ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124 ಎ ಪ್ರಕಾರ ಒಬ್ಬ ವ್ಯಕ್ತಿಯು ದ್ವೇಷ ಅಥವಾ ಆಕ್ಷೇಪಾರ್ಹವಾಗಿ ವರ್ತಿಸುವ ಕೃತ್ಯ ಎಸಗಿದರೆ ಅಥವಾ ಕಾನೂನಿನ ಪ್ರಕಾರ ಸ್ಥಾಪಿಸಲಾದ ಸರ್ಕಾರದ ಬಗ್ಗೆ ವಿನಾಕಾರಣ ಆಕ್ರೋಶ ಪ್ರಚೋದಿಸಿದರೆ ಅದನ್ನು ದೇಶದ್ರೋಹದ ಅಪರಾಧದ ಅಡಿಯಲ್ಲಿ ನೋಡಬೇಕಾಗುತ್ತದೆ. ಇದಕ್ಕೆ ಗರಿಷ್ಠ ಪ್ರಮಾಣದ ಜೀವಾವಧಿ ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಬ್ರಿಟಿಷರ್ ಕಾಲಾವಧಿಯಲ್ಲಿ ಈ ಕಾನೂನು ರೂಪಿತವಾಗಿತ್ತು. ಇದು ಈಗಲೂ ಮುಂದುವರೆದಿದೆ.
ಏನಿದು ವಿವಾದ?: ದೇಶದ ವಿರುದ್ಧ ಮಾತನಾಡುವವರ ವಿರುದ್ಧ ಈ ಕಾನೂನು ಅಸ್ತ್ರವನ್ನು ಬಳಕೆ ಮಾಡಲಾಗುತ್ತದೆ. ಸೆಕ್ಷನ್ 124 ಎ ಅಡಿ ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಪೊಲೀಸರಿಗೆ ಈ ಸೆಕ್ಷನ್ ಅನ್ವಯ ಲಭ್ಯವಾಗುತ್ತದೆ. ಸರ್ಕಾರದಿಂದ ಇದು ದುರ್ಬಳಕೆಯಾಗುತ್ತಿದೆ ಎಂಬ ದೂರು ಈಗ ಹೆಚ್ಚಾಗುತ್ತಿದೆ. ಈ ದುರ್ಬಳಕೆ ತಡೆಯಲು ಇರುವ ಕಾನೂನನ್ನು ರದ್ದುಗೊಳಿಸಬೇಕೆಂದು ಕೆಲವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.