ಚೆನ್ನೈ: ತಮಿಳು ನಾಡಿನ ಗಾಂಧಿಗ್ರಾಮ ಗ್ರಾಮೀಣ ವಿಶ್ವವಿದ್ಯಾಯಲಯದಲ್ಲಿ ಇಂದು ಘಟಿಕೋತ್ಸವ ಕಾರ್ಯಕ್ರಮ ನಡೆಯಲಿದ್ದು, ಈ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು ರಾಜ್ಯದ ಮಧುರೈ ಮತ್ತು ದಿಂಡಿಗಲ್ ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದ್ದಾರೆ.
ಬೆಂಗಳೂರಿನಿಂದ ಹೊರಟ ಪ್ರಧಾನಿ ಮೋದಿ ಮಧ್ಯಾಹ್ನ ಮಧುರೈ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಗಾಂಧಿಗ್ರಾಮ ವಿಶ್ವವಿದ್ಯಾಲಯದ ಘಟಿಕೋತ್ಸವಕ್ಕೆ ತಲುಪಲಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದ್ದು, ಪ್ರಧಾನಿಗಳ ಭೇಟಿಗಾಗಿ ಪೊಲೀಸರು ಬ್ಯಾಕಪ್ ಯೋಜನೆಯೊಂದಿಗೆ ಮಧುರೈ ವಿಮಾನ ನಿಲ್ದಾಣದಿಂದ ಗಾಂಧಿಗ್ರಾಮ ಗ್ರಾಮಾಂತರ ವಿಶ್ವವಿದ್ಯಾಲಯದವರೆಗೆ ಎಂಟು ಕಾರುಗಳ ಭದ್ರತಾ ಕಣ್ಗಾವಲು ವ್ಯವಸ್ಥೆ ಮಾಡಿದ್ದಾರೆ.
ಇಳಯರಾಜ ಮತ್ತು ಉಮಯಾಲಪುರಂ ಶಿವರಾಮನ್ ಅವರಿಗೆ ಗೌರವ ಡಾಕ್ಟರೇಟ್ : ಘಟಿಕೋತ್ಸವ ಸಮಾರಂಭದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಹಾಗೂ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ಉಪಸ್ಥಿತರಿರಲಿದ್ದಾರೆ. ಗಾಂಧಿಗ್ರಾಮ್ ವಿಶ್ವವಿದ್ಯಾನಿಲಯವು ಖ್ಯಾತ ಸಂಗೀತ ವಿದ್ವಾಂಸರಾದ ಇಳಯರಾಜ ಮತ್ತು ಉಮಯಾಲಪುರಂ ಶಿವರಾಮನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಕೋವಿಡ್ -19 ಕಾರಣದಿಂದಾಗಿ ಎರಡು ವರ್ಷಗಳ ನಂತರ ಪ್ರತಿಷ್ಠಿತ ಗಾಂಧಿಗ್ರಾಮ ಗ್ರಾಮೀಣ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭವನ್ನು ಆಯೋಜಿಸಲಾಗಿದೆ. 2018-19 ಮತ್ತು 2019-20 ರಲ್ಲಿ ಗಾಂಧಿಗ್ರಾಮ್ ಗ್ರಾಮೀಣ ವಿಶ್ವವಿದ್ಯಾಲಯದಿಂದ 2,314 ವಿದ್ಯಾರ್ಥಿಗಳು ತಮ್ಮ ಪದವಿ ಪೂರ್ಣಗೊಳಿಸಿದ್ದಾರೆ. ಆದರೆ, ಸಮಯದ ಮಿತಿ ಮತ್ತು ಭದ್ರತಾ ಅಂಶಗಳ ಕಾರಣದಿಂದ ಪ್ರಧಾನಿ ಅವರು ವಿಶ್ವವಿದ್ಯಾನಿಲಯದ ಕೇವಲ ನಾಲ್ವರು ಟಾಪರ್‌ಗಳಿಗೆ ಪದಕಗಳನ್ನು ಹಸ್ತಾಂತರಿಸಲಿದ್ದು, ಇದರಲ್ಲಿ ಇಬ್ಬರು ಟಾಪರ್ಗಳು ಬಾಲಕರಾಗಿದ್ದಾರೆ.
ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ದಿಂಡುಗಲ್ ಮತ್ತು ಮಧುರೈಯಲ್ಲಿ ಮಾತ್ರವಲ್ಲದೇ ಚಿನ್ನಾಲಪಟ್ಟಿ, ಗಾಂಧಿಗ್ರಾಮ, ಮತ್ತು ಅಂಬಾತುರೈ ಪ್ರದೇಶಗಳಲ್ಲಿ ಕೂಡ ಪೊಲೀಸರು ತಮ್ಮ ಕಣ್ಗಾವಲು ಮತ್ತು ಭದ್ರತೆಯನ್ನು ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ನಾಡಪ್ರಭು ಕೆಂಪೇಗೌಡರ ಬೃಹತ್ ಕಂಚಿನ ಪ್ರಗತಿ ಪ್ರತಿಮೆ ಲೋಕಾರ್ಪಣೆ ಮಾಡಿದ ಪ್ರಧಾನಿ