ಜಮ್ಮು ಮತ್ತು ಕಾಶ್ಮೀರ : ಪ್ರಧಾನಿ ಮೋದಿ ಜಮ್ಮು ಭೇಟಿ ಹಿನ್ನೆಲೆ ಜಮ್ಮು ಮತ್ತು ಕಾಶ್ಮೀರದಲ್ಲಿ ಕಟ್ಟೆಚ್ಚರ ವಹಿಸುವಂತೆ ಭದ್ರತಾ ಪಡೆಗಳಿಗೆ ಸೂಚನೆ ನೀಡಲಾಗಿದೆ. ಭದ್ರತಾ ಪಡೆಗಳು ಶ್ರೀನಗರದ ಲಾಲ್‌ಚೋಕ್ ಮತ್ತು ಇತರ ಪ್ರದೇಶಗಳಲ್ಲಿ ತಾತ್ಕಾಲಿಕ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ವಾಹನ ಮತ್ತು ಪಾದಚಾರಿಗಳನ್ನ ತೀವ್ರ ತಪಾಸಣೆ ಮಾಡುತ್ತಿದ್ದಾರೆ.
ಮೂಲಗಳ ಪ್ರಕಾರ ಭದ್ರತಾ ಪಡೆಗಳು ಬೇಸಿಗೆಯ ರಾಜಧಾನಿ ಶ್ರೀನಗರದ ವಾಣಿಜ್ಯ ಕೇಂದ್ರವಾದ ಲಾಲ್‌ಚೌಕ್ ಸೇರಿದಂತೆ ಹಲವು ಪ್ರದೇಶಗಳನ್ನು ಸುತ್ತುವರೆದಿವೆ. ಜತೆಗೆ ಲಾಲ್‌ಚೌಕ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಲಾಗುತ್ತಿದೆ. ಮಹಿಳಾ ಭದ್ರತಾ ಸಿಬ್ಬಂದಿ ಲಾಲ್‌ಚೌಕ್ ಶಾಪಿಂಗ್ ಮಾಲ್‌ನಲ್ಲಿ ಮಹಿಳೆಯರ ಬ್ಯಾಗ್‌ಗಳನ್ನು ಸಹ ಪರಿಶೀಲಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಭಾನುವಾರ ಜಮ್ಮುವಿಗೆ ಆಗಮಿಸುತ್ತಿದ್ದಾರೆ. 2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದ ನಂತರ ಪ್ರಧಾನಿ ನೀಡುತ್ತಿರುವ ಮೊದಲ ರಾಜಕೀಯ ಭೇಟಿ ಇದಾಗಿದೆ.
ಬಾರಾಮುಲ್ಲಾ ಎನ್‌ಕೌಂಟರ್.. ಮೂವರು ಉಗ್ರರ ಹತ್ಯೆ : ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುವ ಎರಡು ದಿನಗಳ ಮೊದಲೇ ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಕಂಜಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವಿನ ಘರ್ಷಣೆಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ. 40 ಗಂಟೆಗಳ ಕಾಲ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಅಧಿಕಾರಿ, ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಯೋಧರು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಸ್ಥಳದಿಂದ ಮೂವರು ಉಗ್ರಗಾಮಿಗಳ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆ(ಶುಕ್ರವಾರ) ಎರಡು ಮತ್ತು ಇಂದು(ಶನಿವಾರ) ಒಂದು ಮೃತದೇಹ ಪತ್ತೆಯಾಗಿದೆ. ನಿನ್ನೆ ಪತ್ತೆಯಾದ ಶವಗಳಲ್ಲಿ ಹಿರಿಯ ಎಲ್ಇಟಿ ಕಮಾಂಡರ್ ಯೂಸುಫ್ ಕಾಂಟ್ರೋ ಅವರ ಮೃತದೇಹ ಸೇರಿದೆ. ಏಪ್ರಿಲ್ 21 ರಂದು ಮುಂಜಾನೆ 4 ಗಂಟೆಗೆ ಬಾರಾಮುಲ್ಲಾ ಜಿಲ್ಲೆಯ ಮಾಲ್ವಾ ಪ್ರದೇಶದಲ್ಲಿ ಘರ್ಷಣೆ ಸಂಭವಿಸಿದೆ.
ಜಂಟಿ ಪೊಲೀಸ್ ತಂಡವು ಸೇನೆಯೊಂದಿಗೆ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಸಂದರ್ಭದಲ್ಲಿ ಉಗ್ರರು ಮನಬಂದಂತೆ ಗುಂಡು ಹಾರಿಸಿದ್ದು, ಇದರಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಸೈನಿಕರು ಗಾಯಗೊಂಡಿದ್ದಾರೆ.
ನಂತರ ಎಸ್‌ಎಸ್‌ಪಿ ಬಾರಾಮುಲ್ಲಾ ನೇತೃತ್ವದ ಬಾರಾಮುಲ್ಲಾ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಘರ್ಷಣೆಯಲ್ಲಿ ಬಾರಾಮುಲ್ಲಾ ಜಿಲ್ಲೆಯ ಒಬ್ಬ ಪೊಲೀಸ್ ಕೂಡ ಗಾಯಗೊಂಡಿದ್ದು, ಅವರನ್ನು ಶ್ರೀನಗರದ ಸೇನಾ ಮೂಲ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಹೆಣ್ಣು ಮಕ್ಕಳಿಗೆ ಶಿಕ್ಷಣಕ್ಕೆ ಅವಕಾಶ ನೀಡುವಂತೆ ತಾಲಿಬಾನ್‌ಗೆ ಭಾರತ, ಯುಕೆ ಒತ್ತಾಯ