ನವದೆಹಲಿ: ಕಾಬೂಲ್ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್ ಆಫ್ ಖೋರಾಸನ್ (ಐಸಿಸ್-ಕೆ) ನಡೆಸಿದ ದಾಳಿಯ ನಂತರ ಭಾರತದಲ್ಲೂ ಎಚ್ಚರಿಕೆ ವಹಿಸಲಾಗಿದೆ. ಕೆಲವೆಡೆ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಭದ್ರತಾ ಪಡೆಗಳ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಮ್ಮ ಭದ್ರತಾ ಪಡೆಗಳು ಭಾರೀ ಎಚ್ಚರಿಕೆ ವಹಿಸಿವೆ. ಪಾಕಿಸ್ತಾನದ ಪಶ್ಚಿಮ ಮತ್ತು ಉತ್ತರ ಗಡಿಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸಲಾಗಿದೆ. ಕಾಬೂಲ್ನಲ್ಲಿ ಆದ ಸ್ಫೋಟದ ಬಳಿಕ ಭದ್ರತೆಯ ಕಾಳಜಿಯನ್ನು ಹೆಚ್ಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮನೋಹರ್ ಪರಿಕ್ಕರ್ ಇನ್ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಅಂಡ್ ಅನಾಲಿಸಿಸ್ (MPIDSA)ನ ಮಾಜಿ ಸಂಶೋಧನಾ ಸಹವರ್ತಿ ಮತ್ತು ದೆಹಲಿ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಸಂಬಂಧದ ಶಿಕ್ಷಕ ಪ್ರೊ.ಸಂಜೀವ್ ಶ್ರೀವಾಸ್ತವ್ ಕೂಡ ಅಫ್ಘಾನಿಸ್ತಾನದಲ್ಲಿ ಐಸಿಸ್ ದಾಳಿ ಭಾರತೀಯರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಲಿಬಾನ್ ಮತ್ತು ಐಸಿಸ್ ಎರಡೂ ಶತ್ರುಗಳಾಗಿದ್ದರೂ, ಅವು ನಮ್ಮ ವೈರಿ ರಾಷ್ಟ್ರಕ್ಕೆ ಬಂದಾಗ ಭಾರತಕ್ಕೆ ಒಳ್ಳೆಯ ಸಂಕೇತವಲ್ಲ. ಪ್ರಧಾನಿ ಮೋದಿ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಅಳವಡಿಸಿಕೊಂಡಿದೆ. ಆದರೂ ನಾವು ಅತ್ಯಂತ ಜಾಗರೂಕವಾಗಿರಬೇಕು ಎಂದು ಸಂಜೀವ್ ಶ್ರೀವಾಸ್ತವ್ ಎಚ್ಚರಿಕೆ ನೀಡಿದ್ದಾರೆ.
ತಾಲಿಬಾನ್ನ ಕುರಿತಂತೆ ಮಾತನಾಡಿರುವ ಮಾಜಿ ರಾಜತಾಂತ್ರಿಕ ಅಧಿಕಾರಿ ವಿಷ್ಣು ಪ್ರಕಾಶ್, ತಾಲಿಬಾನ್, ಐಸಿಸ್, ಐಎಸ್‌ಕೆಪಿ ಯಾವುದೇ ಭಯೋತ್ಪಾದಕ ಸಂಘಟನೆಯಾದರೂ ಅದು ಭಾರತಕ್ಕೆ ಬೆದರಿಕೆಯಾಗಿದೆ. ಅವುಗಳನ್ನು ನಿಭಾಯಿಸುವ ಸಾಮರ್ಥ್ಯ ಭಾರತಕ್ಕಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿನ ಎಲ್ಲ ಭಾರತೀಯರನ್ನ ಕರೆತರಲಾಗಿದೆ: ವಿದೇಶಾಂಗ ಇಲಾಖೆ ಸ್ಪಷ್ಟನೆ