ಕೇರಳ(ಕೋಯಿಕ್ಕೋಡ್): ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಮೊದಲ ವರ್ಷದ ಎಂಬಿಬಿಎಸ್ ತರಗತಿಯಲ್ಲಿ ದಾಖಲಾತಿ ಇಲ್ಲದೇ ಹಾಜರಾದ ಘಟನೆ ಕೋಯಿಕ್ಕೋಡ್ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಪ್ರವೇಶ ಪಟ್ಟಿಯಲ್ಲಿ ಆಕೆಯ ಹೆಸರಿಲ್ಲದೇ ಇದ್ದುದನ್ನು ನೋಡಿದ ಪ್ರಾಂಶುಪಾಲರು ಈ ಕುರಿತು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಪೊಲೀಸರಿಗೆ ದೂರು ನೀಡಿದ್ದಾರೆ.
ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಮಲಪ್ಪುರಂ ಮೂಲದವಳು. ಈಕೆ ಸಿಬ್ಬಂದಿಯ ಕಣ್ಣು ತಪ್ಪಿಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ತರಗತಿಗೆ ನಾಲ್ಕು ದಿನ ಹಾಜರಾಗಿದ್ದು, ಹಾಜರಾತಿಯನ್ನೂ ದಾಖಲಿಸಿದ್ದಾಳೆ. ಹೀಗೆ 5 ನೇ ದಿನವೂ ತರಗತಿಯಲ್ಲಿ ಕಾಣಿಸಿಕೊಂಡಿರುವುದನ್ನು ಕಂಡ ಪ್ರಾಂಶುಪಾಲರು ಆಕೆಯ ಬಗ್ಗೆ ಪರಿಶೀಲಿಸಿದಾಗ ಪ್ರವೇಶ ಪಟ್ಟಿಯಲ್ಲಿ ಹೆಸರು ದಾಖಲಾಗಿರಲಿಲ್ಲ. ಆದರೆ ಹಾಜರಾತಿ ರಿಜಿಸ್ಟರ್‌ನಲ್ಲಿ ಇರುವುದನ್ನು ನೋಡಿ ಅನುಮಾನದಿಂದ ಅಲ್ಲಿಯ ವೈದ್ಯಕೀಯ ಕಾಲೇಜು ಪೊಲೀಸರಿಗೆ ದೂರು ನೀಡಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಿಂದ ಬಾಲಕಿ ಎಂಬಿಬಿಎಸ್‌ಗೆ ಪ್ರವೇಶ ಪಡೆದಿರುವುದಾಗಿ ಹಲವರಿಗೆ ವಾಟ್ಸಾಪ್ ಸಂದೇಶ ಕಳುಹಿಸಿದ್ದಾಳೆ. ಅಲ್ಲದೇ ಇನ್ನೂ ಕೂಡ ಆಕೆ ದ್ವಿತೀಯ ಪಿಯು ಓದುತ್ತಿದ್ದಾಳೆ. ಆಕೆಗೆ ತಾನು ವೈದ್ಯೆ ಆಗಬೇಕೆಂದಿದ್ದ ಆಸೆಯೇ ಈ ರೀತಿಯ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ತಿಳಿದು ಬಂದಿದೆ.
ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಇದುವರೆಗೆ ಇಂತಹ ಘಟನೆ ನಡೆದಿರಲಿಲ್ಲ. ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ತರಗತಿಗೆ ಸೇರಿಸುವ ಮೊದಲು ಪ್ರತಿಯೊಂದು ಪ್ರವೇಶ ಪತ್ರವನ್ನು ಪರಿಶೀಲಿಸುವ ನಿಯಮವಿದೆ. ಆದರೆ ವಿದ್ಯಾರ್ಥಿಗಳು ಬೇಗ ಬಂದಿದ್ದರಿಂದ ತರಗತಿಗೆ ತಡವಾಗುತ್ತದೆ ಎಂಬ ತರಾತುರಿಯಲ್ಲಿ ಕಡ್ಡಾಯ ತಪಾಸಣೆ ಮಾಡದೇ ಪ್ರವೇಶ ಪಡೆಯಲಾಯಿತು ಎಂದು ಅಲ್ಲಿಯ ಸಿಬ್ಬಂದಿ ವಿವರಣೆ ನೀಡಿದ್ದಾರೆ.
ವಿಶೇಷವೆಂದರೆ, ಈ ಘಟನೆ ಬಗ್ಗೆ ಮನಗಂಡ ಕೂಡಲೇ ವಿಚಾರಣೆ ಆರಂಭಿಸಲಾಗಿತ್ತು. ಅಷ್ಟೊತ್ತಿಗಾಗಲೇ ಆ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿ ಹಾಜರಾತಿ ರಿಜಿಸ್ಟರ್‌ನಲ್ಲಿ ಬಾಲಕಿಯ ಹೆಸರು ಹೇಗೆ ಸೇರಿದೆ ಎಂಬುದನ್ನು ಕಂಡುಹಿಡಿಯಲು ವೈದ್ಯಕೀಯ ಕಾಲೇಜು ಅಧಿಕಾರಿಗಳು ಆಂತರಿಕ ತನಿಖೆ ಪ್ರಾರಂಭಿಸಿದ್ದಾರೆ.
ಇದನ್ನೂ ಓದಿ: ಲೂಧಿಯಾನದ ಕಾರಾಗೃಹದಲ್ಲಿ ಕೈದಿಗಳ ಹೊಡೆದಾಟ: ಮೂವರಿಗೆ ಗಾಯ