ಕೋಲ್ಕತ್ತಾ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಮುಖಂಡ ಸುವೇಂದು ಅಧಿಕಾರಿಯ ನಡುವಿನ ಪಶ್ಚಿಮ ಬಂಗಾಳ ಚುನಾವಣೆಯ ಅತ್ಯಂತ ಕುತೂಹಲಕಾರಿ ಸ್ಪರ್ಧೆಗೆ ನಂದಿಗ್ರಾಮ ಸಾಕ್ಷಿಯಾಗಲಿದೆ. ಇದರ ಜೊತೆಗೆ ಇತರ ಕ್ಷೇತ್ರಗಳಲ್ಲಿಯೂ ಏಪ್ರಿಲ್ 1 ರಂದು ಎರಡನೇ ಹಂತದ ಮತದಾನ ನಡೆಯಲಿರೋ ಕೆಲವು ಕ್ಷೇತ್ರಗಳು ಪ್ರಮುಖವಾಗಿವೆ.
ಎರಡನೇ ಹಂತದಲ್ಲಿ ದಕ್ಷಿಣ 24 ಪರಗಣಗಳು, ಪಶ್ಚಿಮ ಮದಿನಿಪುರ, ಬಂಕುರಾ ಮತ್ತು ಪುರ್ವ ಮದಿನಿಪುರ ಜಿಲ್ಲೆಗಳಲ್ಲಿ 30 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಅಧಿಕಾರಿ ನಂದಿಗ್ರಾಮದ ಹಾಲಿ ಶಾಸಕರಾಗಿದ್ದಾರೆ. ನಂದಿಗ್ರಾಮ ಕ್ಷೇತ್ರದಲ್ಲಿ ಸಿಪಿಐ - ಎಂ ಸುವೇಂದು ಅಧಿಕಾರಿ ಮತ್ತು ಮಮತಾ ಬ್ಯಾನರ್ಜಿ ನಡುವಿನ ಭಾರಿ ಪೈಪೋಟಿ ನಡುವೆ ಸಿಪಿಐ -ಎಂ ಕೂಡ ಸ್ಟ್ರಾಂಗ್ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಎಡ- ಐಎಸ್ಎಫ್ -ಕಾಂಗ್ರೆಸ್ ಮೂರು ಪಕ್ಷಗಳ ಮೈತ್ರಿ ಅಭ್ಯರ್ಥಿಯಾಗಿ ಮೀನಾಕ್ಷಿ ಮುಖರ್ಜಿ ಸ್ಪರ್ಧೆಗಿಳಿದಿದ್ದಾರೆ.
ಇನ್ನು ಬಂಗಾಳದ ಡೆಬ್ರಾದಿಂದ ಇಬ್ಬರು ಮಾಜಿ ಪೊಲೀಸ್ ಅಧಿಕಾರಿಗಳು ಚುನಾವಣೆಗೆ ಸ್ಪರ್ಧಿಸಿದ್ದಾರೆ. ಹೀಗಾಗಿ ಡೆಬ್ರಾ ವಿಧಾನಸಭಾ ಕ್ಷೇತ್ರ ಕೂಡ ಕುತೂಹಲ ಕೆರಳಿಸಿದೆ. ಟಿಎಂಸಿ ಹುಮಾಯುನ್ ಕಬೀರ್ ಎಂಬ ಮಾಜಿ ಐಪಿಎಸ್ ಅಧಿಕಾರಿಯನ್ನು ಚುನಾವಣಾ ಕಣಕ್ಕಿಳಿಸಿದ್ದರೆ, ಬಿಜೆಪಿ ಸಹ ಮಾಜಿ ಐಪಿಎಸ್ ಅಧಿಕಾರಿಯ ಭಾರತಿ ಘೋಷ್ ಅವರನ್ನು ಕಣಕ್ಕಿಳಿಸಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಡೆಬ್ರಾ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಜಯಗಳಿಸಿದ್ರು.
ಪಶ್ಚಿಮ ಮದಿನಿಪುರದ ಸಬಾಂಗ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಮಾನಸ್ ರಂಜನ್ ಭುನಿಯಾ ಅವರು ಬಿಜೆಪಿಯ ಅಮೂಲ್ಯ ಮೈಥಿ ಮತ್ತು ಎಸ್‌ಯುಸಿಐ (ಸಿ) ಯ ಹರೆಕೃಷ್ಣ ಮೈಥಿ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. 2016 ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭುನಿಯಾ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು.
ಇನ್ನು ಖರಗ್ಪುರದ ಸದರ್ ಕ್ಷೇತ್ರದಲ್ಲಿ ನಟ ಕಮ್ ರಾಜಕಾರಣಿ ಹಿರಣ್ಮೋಯ್ ಚಟ್ಟೋಪಾಧ್ಯಾಯ ಬಿಜೆಪಿ ಅಭ್ಯರ್ಥಿ ಪ್ರದೀಪ್ ಸರ್ಕಾರ್ ವಿರುದ್ಧ ಸೆಣಸಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ತನ್ಮಯ್ ಘೋಷ್ ಬಂಕುರಾ ಜಿಲ್ಲೆಯ ಬಿಷ್ಣುಪುರ್ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದು, ಇಲ್ಲಿ ಟಿಎಂಸಿಯಿಂದ ಅರ್ಚಿತಾ ಬಿದ್ ಮತ್ತು ಕಾಂಗ್ರೆಸ್ನಿಂದ ಡೆಬು ಚಟರ್ಜಿ ಸ್ಪರ್ಧಿಸಿದ್ದಾರೆ.
ಒಟ್ಟಿನಲ್ಲಿ 2ನೇ ಹಂತದ ಮತದಾನವು ಸಿನಿಮಾ ನಟರ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ.