ಚೆನ್ನೈ: ತಮಿಳುನಾಡಿನ ತಂಜಾವೂರು ಜಿಲ್ಲೆಯ ತಂಡನ್‌ತೋಟ್ಟಂ ನಾದನಪುರೇಶ್ವರ್ ಸಿವನ್ ದೇವಸ್ಥಾನದಿಂದ ನಾಪತ್ತೆಯಾಗಿದ್ದ 13 ನೇ ಶತಮಾನದ ಚೋಳರ ಕಾಲದ ಶೈವ ಕವಿ, ಸಂಬಂದಾರ್ ಸಂತರ ನೃತ್ಯ ಮಾಡುತ್ತಿರುವ ಶೈಲಿಯ ಕಂಚಿನ ವಿಗ್ರಹವು ಅಮೆರಿಕದ ಕ್ರಿಸ್ಟೀಸ್ ಹರಾಜು ಕಚೇರಿಯಲ್ಲಿ ಪತ್ತೆಯಾಗಿದೆ ಎಂದು ತಮಿಳುನಾಡು ಸಿಐಡಿಯ ವಿಗ್ರಹ ಪತ್ತೆ ವಿಭಾಗವು (ಐಡಲ್ ವಿಂಗ್) ಹೇಳಿದೆ.
ಸುಂದರವಾಗಿ ಕೆತ್ತಿದ ಸಂಬಂದಾರ್ ವಿಗ್ರಹವು ಕಮಲದ ಮೇಲೆ ಎಡಗಾಲು ಮೇಲಕ್ಕೆತ್ತಿ ಎಡಗೈಯನ್ನು ಚಾಚಿ, ಘಂಟೆಗಳೊಂದಿಗೆ ಸೊಂಟದ ಪಟ್ಟಿಯನ್ನು ಧರಿಸಿ ನೃತ್ಯ ಮಾಡುತ್ತಿರುವಂತೆ ಕಾಣುತ್ತದೆ. ತೋಳುಗಳು, ಎದೆ, ಕುತ್ತಿಗೆ ಮತ್ತು ಕಿವಿಗಳನ್ನು ಸುಂದರವಾದ ಆಭರಣಗಳಿಂದ ಅಲಂಕರಿಸಲ್ಪಟ್ಟಿವೆ. ಬಾದಾಮಿ ಆಕಾರದ ಕಣ್ಣುಗಳು, ಎತ್ತರದ ಶಂಕುವಿನಾಕಾರದ ಶಿರಸ್ತ್ರಾಣವು ವಿಗ್ರಹದ ತಲೆಯನ್ನು ಅಲಂಕರಿಸಿದೆ.
ಇತ್ತೀಚೆಗಷ್ಟೇ ಅದೇ ತಂಡನ್‌ತೋಟ್ಟಂ ದೇವಸ್ಥಾನದ ಪಾರ್ವತಿ ದೇವಿಯ ವಿಗ್ರಹವನ್ನು ಪತ್ತೆಹಚ್ಚಿದ ನಂತರ, ಇದು ಅಮೆರಿಕದಲ್ಲಿ ಪತ್ತೆಯಾದ ಎರಡನೇ ವಿಗ್ರಹವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
1971ರ ಮೇನಲ್ಲಿ ನಾದನಪುರೇಶ್ವರ ಸಿವನ್ ದೇವಸ್ಥಾನದ ಸಂಬಂದಾರ್, ಕೃಷ್ಣ ಕಾಳಿಂಗನರ್ತನ, ಅಯ್ಯನಾರ್, ಅಗಸ್ತ್ಯರ್ ಮತ್ತು ಪಾರ್ವತಿ ವಿಗ್ರಹಗಳು ಕಳ್ಳತನವಾಗಿವೆ ಎಂದು ಕೆ. ವಾಸು ಎಂಬುವರು 2019 ರಲ್ಲಿ ನೀಡಿದ ದೂರಿನ ಮೇರೆಗೆ ಸಿಐಡಿಯ ವಿಗ್ರಹ ಪತ್ತೆ ವಿಭಾಗವು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದೆ.
ಐಡಲ್ ವಿಂಗ್ ಪೊಲೀಸರ ಪ್ರಕಾರ, ಕಾಣೆಯಾದ ನೃತ್ಯ ಸಂಬಂದಾರ ವಿಗ್ರಹವನ್ನು ಕ್ರಿಸ್ಟೀಸ್ ಹರಾಜು ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿತವಾಗಿದ್ದನ್ನು ಇನ್ಸ್‌ಪೆಕ್ಟರ್ ಇಂದಿರಾ ಅವರು ಪತ್ತೆ ಮಾಡಿದ್ದರು.
ಕಳವು ಮಾಡಲಾದ ಸಂಬಂದಾರ ವಿಗ್ರಹವನ್ನು ಕ್ರಿಸ್ಟೀಸ್ ಡಾಟ್ ಕಾಂ ನವರು ಖರೀದಿಸಿದ್ದಾರೆ. ಈಗ ಐಡಲ್ ವಿಂಗ್ನವರು ವಿಗ್ರಹವನ್ನು ಭಾರತಕ್ಕೆ ಮರಳಿಸುವಂತೆ ಕ್ರಿಸ್ಟೀಸ್ ಡಾಟ್ ಕಾಂ ಗೆ ಪತ್ರ ಬರೆದಿದ್ದಾರೆ. ವಿಗ್ರಹದ ಮಾಲೀಕತ್ವವನ್ನು ಸಾಬೀತುಪಡಿಸುವ ಸೂಕ್ತ ದಾಖಲೆಗಳನ್ನು ಸಲ್ಲಿಸಿ ವಿಗ್ರಹವನ್ನು ಮರಳಿ ತರುವ ಪ್ರಕ್ರಿಯೆಯನ್ನು ಐಡಲ್ ವಿಂಗ್ ಆರಂಭಿಸಿದೆ. ಒಂದೊಮ್ಮೆ ವಿಗ್ರಹ ಭಾರತಕ್ಕೆ ಮರಳಿ ಬಂದಲ್ಲಿ ಅದನ್ನು ನಾದನಪುರೇಶ್ವರ್ ಸಿವನ್ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದು ಐಡಲ್ ವಿಂಗ್ ತಿಳಿಸಿದೆ.