ಹೈದರಾಬಾದ್: ರಷ್ಯಾದ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ರವಾನೆಯು ಸುಮಾರು 60 ಸಾವಿರ ಡೋಸ್ಗಳನ್ನು ಹೊಂದಿದೆ. ಇದು ಕೊರೊನಾ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ ಎಂದು ರಷ್ಯಾದ ಭಾರತೀಯ ರಾಯಭಾರಿ ನಿಕೋಲಾಯ್ ಕುದಶೇವ್ ಹೇಳಿದ್ದಾರೆ.
"ಕೋವಿಡ್ ವಿರುದ್ಧದ ಹೋರಾಟದಲ್ಲಿ ಭಾರತದ ಜೊತೆ ರಷ್ಯಾ ನಿಲ್ಲುತ್ತದೆ. ಈ ಬೆಳವಣಿಗೆ ನೋಡಿ ಸಂತೋಷವಾಗುತ್ತದೆ. ಇದು ಇತ್ತೀಚಿನ ದಿನಗಳಲ್ಲಿ ನಮ್ಮ ದ್ವಿಪಕ್ಷೀಯ ಸಹಕಾರದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾಗಿದೆ" ಎಂದರು.
ವಿಶ್ವದ ಅತಿದೊಡ್ಡ ವ್ಯಾಕ್ಸಿನೇಷನ್ ಅಭಿಯಾನಕ್ಕೆ ಕೊಡುಗೆ ನೀಡುವ, ಭಾರತದಲ್ಲಿ ಬಳಸಿದ ಮೊದಲ ವಿದೇಶಿ ನಿರ್ಮಿತ ಲಸಿಕೆ ಸ್ಪುಟ್ನಿಕ್ ವಿ ಆಗಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಈಗಾಗಲೇ ಭಾರತದಲ್ಲಿ ನೀಡಲು ಆರಂಭಿಸಲಾಗಿದೆ. ಹೈದರಾಬಾದ್ ನ ಡಾ.ರೆಡ್ಡೀಸ್ ಸಂಸ್ಥೆ ವಿತರಣೆಯನ್ನು ಆರಂಭಿಸಿದ್ದು, ಮೊದಲ ಬಾರಿಗೆ ಹೈದರಾಬಾದ್ನಲ್ಲಿಯೇ ನೀಡಲಾಯಿತು. ಇನ್ನು ಮೇ 1 ರಂದು ಭಾರತಕ್ಕೆ ಲಸಿಕೆಯ ಮೊದಲ ಬ್ಯಾಚ್ ಆಗಮಿಸಿದೆ.
"ಸ್ಪುಟ್ನಿಕ್ ವಿ ರಷ್ಯಾ-ಭಾರತದ ಲಸಿಕೆಯಾಗಿದೆ. ಭಾರತದಲ್ಲಿ ಅದರ ಉತ್ಪಾದನೆಯನ್ನು ಕ್ರಮೇಣ ವರ್ಷಕ್ಕೆ 850 ಮಿಲಿಯನ್ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು. ಸಾಂಕ್ರಾಮಿಕ ರೋಗವನ್ನು ತಡೆಯಲು ಭಾರತದೊಂದಿಗೆ ನಮ್ಮ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರವನ್ನು ಇನ್ನಷ್ಟು ವಿಸ್ತರಿಸಲು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.
ಭಾರತದಲ್ಲಿ ಸ್ಪುಟ್ನಿಕ್ ಲೈಟ್ ಎಂಬ ಹೆಸರಿನ ಸಿಂಗಲ್-ಡೋಸ್ ಲಸಿಕೆಯನ್ನು ಶೀಘ್ರದಲ್ಲೇ ಪರಿಚಯಿಸುವ ಯೋಜನೆ ಇದೆ ಎಂದು ಅವರು ಹೇಳಿದರು.
ಸ್ಪುಟ್ನಿಕ್ ವಿ ಅನ್ನು ಭಾರತದಲ್ಲಿ ಏಪ್ರಿಲ್ 12, 2021 ರಂದು ಅನುಮೋದಿಸಲಾಯಿತು. ಬಳಿಕ ತುರ್ತು ಬಳಕೆಯ ಅನುಮತಿಯನ್ನು ಸಹ ನೀಡಲಾಯಿತು.