ಪಣಜಿ (ಗೋವಾ): ಕೆಲ ದಿನಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮುಂಬರುವ ಹೋಳಿ, ಈಸ್ಟರ್ ಮತ್ತು ಈದ್ ಹಬ್ಬಗಳ ಆಚರಣೆಗೆ ಗೋವಾ ಸರ್ಕಾರ ನಿರ್ಬಂಧ ವಿಧಿಸಿದ್ದು, 144 ಸೆಕ್ಷನ್ ಜಾರಿ ಮಾಡಿದೆ.
ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕಾಗಿ ಮುಂಬರುವ ಹೋಳಿ, ಈದ್-ಉಲ್-ಫಿತರ್, ಶಬ್-ಇ ಬರಾತ್, ಈಸ್ಟರ್ ಮುಂತಾದ ಹಬ್ಬ -ಹರಿದಿನಗಳ ಸಾರ್ವಜನಿಕ ಆಚರಣೆಗೆ ನಿಷೇಧ ಹೇರಲಾಗಿದೆ. ಅದೇ ರೀತಿ ಈಗ ಗೋವಾದಲ್ಲೂ ಪ್ರತಿಬಂಧಕಾಜ್ಞೆಗಳನ್ನು ವಿಧಿಸಲಾಗಿದೆ.
ಗುಂಪು ಸೇರುವುದು, ಸಾರ್ವಜನಿಕವಾಗಿ ಸಭೆ ಸಮಾರಂಭ ನಡೆಸದಂತೆ ಆದೇಶ ಹೊರಡಿಸಿ ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ ಆದೇಶದ ವಿರುದ್ಧವಾಗಿ ಜನರು ನಡೆದುಕೊಂಡರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 144 ರ ಅಡಿಯಲ್ಲಿ ಶಿಕ್ಷೆಯಾಗುತ್ತದೆ ಎಂದು ಉತ್ತರ ಗೋವಾದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಜಿತ್ ರಾಯ್ ಎಚ್ಚರಿಕೆ ನೀಡಿದ್ದಾರೆ.
ಓದಿ: ನಿಲ್ಲಿಸಿದ್ದ ಲಾರಿಗೆ ಟೆಂಪೋ ಟ್ರಾವೆಲರ್ ಡಿಕ್ಕಿ: ಐವರು ಮಹಿಳೆಯರು ಸೇರಿ 8 ಯಾತ್ರಾರ್ಥಿಗಳು ದುರ್ಮರಣ
ರಾಜ್ಯ ಆರೋಗ್ಯ ಇಲಾಖೆಯ ಪ್ರಕಾರ, ಗೋವಾದಲ್ಲಿ ಪ್ರಸ್ತುತ 1,379 ಸಕ್ರಿಯ ಪ್ರಕರಣಗಳಿದ್ದು, ಕಳೆದ 24 ಗಂಟೆಗಳಲ್ಲಿ 170 ಹೊಸ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಇವರೆಗೆ ಒಟ್ಟು 824 ಮಂದಿ ಸಾವನ್ನಪ್ಪಿದ್ದಾರೆ.