ತಿರುಚ್ಚಿ(ತ.ನಾಡು) : ತುರೈಯೂರಿನ ಖಾಸಗಿ ಶಾಲೆಯೊಂದರಲ್ಲಿ 11ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿ ಆ.5ರಂದು ಆಟವಾಡಲು ಹೊರ ಹೋದಾಗ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಪೋಷಕರು ತುರೈಯೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಆ ಬಾಲಕ ಓದುತ್ತಿದ್ದ ಶಾಲೆಯಲ್ಲಿ ಮತ್ತೊಂದು ಅಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅದೇ ಶಾಲೆಯ ಶಿಕ್ಷಕಿ ಶರ್ಮಿಳಾ (26) ಕೂಡ ನಾಪತ್ತೆಯಾಗಿದ್ದಾರೆ.
ಶಿಕ್ಷಕಿಯ ತಾಯಿಯನ್ನು ಈ ಸಂಬಂಧ ವಿಚಾರಣೆ ನಡೆಸಲಾಗಿ, ವಿದ್ಯಾರ್ಥಿಯೊಂದಿಗೆ ಆಗಾಗ ಸೆಲ್‌ಫೋನ್‌ನಲ್ಲಿ ಶಿಕ್ಷಕಿ ಮಾತನಾಡುತ್ತಿದ್ದಳು ಎಂದು ತಿಳಿದು ಬಂದಿದೆ. ಇದನ್ನೇ ಆಧಾರವಾಗಿರಿಸಿಕೊಂಡು ಕರೆ ಟ್ರ್ಯಾಕ್ ಮಾಡಿದ ಪೊಲೀಸರಿಗೆ ಅಚ್ಚರಿಯ ಮಾಹಿತಿ ಲಭಿಸಿದೆ. ವೆಲಂಕಣಿ, ತಿರುವರೂರ್, ತಂಜಾವೂರು ಮತ್ತು ತಿರುಚ್ಚಿಯಂತಹ ಸ್ಥಳಗಳಲ್ಲಿ ಶಿಕ್ಷಕಿ ಓಡಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ.
ಇದನ್ನೂ ಓದಿ: ಮೇಕೆದಾಟು: ತಮಿಳುನಾಡು ವಿರುದ್ಧ ವಿಧಾನ ಪರಿಷತ್ನಲ್ಲೂ ಖಂಡನಾ ನಿರ್ಣಯ
ಪೊಲೀಸರು ನಿನ್ನೆ ತಿರುಚ್ಚಿಯ ಎಡಮಲಪಟ್ಟಿ ಪುತ್ತೂರಿನಲ್ಲಿ ಶಿಕ್ಷಕಿಯನ್ನು ಪತ್ತೆ ಮಾಡಿದ್ದಾರೆ. ಶಿಕ್ಷಕಿ ಶರ್ಮಿಳಾ ಸ್ನೇಹಿತೆಯ ಮನೆಯಲ್ಲಿ ವಿದ್ಯಾರ್ಥಿಯೊಂದಿಗೆ ಉಳಿದುಕೊಂಡಿರುವುದು ಪತ್ತೆಯಾಗಿದೆ. ಈ ಸಂಬಂಧ ಹಲವು ಹಂತದ ತನಿಖೆಯನ್ನು ಪೊಲೀಸರು ನಡೆಸಿದ್ದಾರೆ. ತನಿಖೆಯ ವೇಳೆ ಶರ್ಮಿಳಾ ತಂಜಾವೂರಿನ ಪೆರುವುಡೈಯಾರ್ ದೇವಸ್ಥಾನದಲ್ಲಿ ವಿದ್ಯಾರ್ಥಿಯನ್ನು ಮದುವೆಯಾಗಿರುವುದು ಬೆಳಕಿಗೆ ಬಂದಿದೆ.
ಘಟನೆ ಸಂಬಂಧ ಶರ್ಮಿಳಾ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 17 ವರ್ಷದ ಹುಡುಗನನ್ನು ಅಪಹರಿಸಿ ಮದುವೆಯಾಗಿದ್ದಕ್ಕಾಗಿ ಬಂಧಿಸಲಾಗಿದೆ. ಪೊಲೀಸರು ವಿದ್ಯಾರ್ಥಿಯನ್ನು ಪೋಷಕರಿಗೆ ಒಪ್ಪಿಸಿ ಶರ್ಮಿಳಾರನ್ನು ತಿರುಚ್ಚಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ.