ದಾಮೋಹ್ - ಭೋಪಾಲ್: ಮಧ್ಯಪ್ರದೇಶದ ದಾಮೋಹ್‌ನಲ್ಲಿರುವ ಶಾಲೆಯೊಂದರಲ್ಲಿ ಹಿಂದೂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವಂತೆ ಒತ್ತಾಯಿಸಿದ ವಿಷಯದ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ, ಜಿಲ್ಲಾಧಿಕಾರಿಗಳು ಈ ಪ್ರಕರಣದಕ್ಕೆ ಸಂಬಂಧಿಸಿದಂತೆ 3 ಸದಸ್ಯರ ಸಮಿತಿಯನ್ನು ರಚಿಸಿ ಮರು ತನಿಖೆಗೆ ಆದೇಶಿಸಿದ್ದಾರೆ.
ದಾಮೋಹ್‌ನ ಬಿಜೆಪಿ ಸಂಸದ ಮತ್ತು ಕೇಂದ್ರ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದಾಮೋಹ್‌ನ ಗಂಗಾ ಜಮುನಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಹಿಂದೂ ಹುಡುಗಿಯರು ಹಿಜಾಬ್ ಧರಿಸಿದ್ದ ಫೋಟೋ ಈಗ ಮಧ್ಯಪ್ರದೇಶದಾದ್ಯಂತ ಸದ್ದು ಮಾಡುತ್ತಿವೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈಗಾಗಲೇ ಮಾಹಿತಿ ಪಡೆದು ತನಿಖೆಗೆ ಆದೇಶಿಸಿದ್ದಾರೆ.
ಇದೀಗ ಈ ಬಗ್ಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ದಮೋಹ್ ಜಿಲ್ಲಾಧಿಕಾರಿಗೆ ಸಿಎಂ ಶಿವರಾಜ್ ಸೂಚನೆ ನೀಡಿದ್ದಾರೆ. ಶಾಲೆಯ ಹೊರಗೆ ಹಾಕಿದ ಪೋಸ್ಟರ್ ಒಂದರಲ್ಲಿ ಹಿಂದೂ ಹುಡುಗಿಯರು ಹಿಜಾಬ್ ಧರಿಸಿರುವುದನ್ನು ತೋರಿಸಲಾಗಿದೆ. ಇಂತಹ ಬ್ಯಾನರ್ ಅಳವಡಿಸಿರುವ ವಿಷಯ ಬೆಳಕಿಗೆ ಬಂದ ಕೂಡಲೇ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಶಾಲಾ ಆಡಳಿತ ಮಂಡಳಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದವು.
ಗೃಹ ಸಚಿವರಿಂದ ತನಿಖೆಗೆ ಆದೇಶ: ಈ ಸಂಬಂಧ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಬುಧವಾರ ತನಿಖೆಗೆ ಆದೇಶಿಸಿದ್ದರು. ಇದೇ ವೇಳೆ, ಶಾಲಾ ಶಿಕ್ಷಣ ಸಚಿವ ಇಂದರ್ ಸಿಂಗ್ ಪರ್ಮಾರ್ ಮಾತನಾಡಿರುವ ವಿಚಾರವೂ ಮುನ್ನಲೆಗೆ ಬಂದಿದೆ. ಶಾಲೆಯ ಉಡುಗೆ ತೊಡುಗೆ ಬಗ್ಗೆ ತನಿಖೆ ನಡೆಸುವುದಾಗಿ ಅವರು ಹೇಳಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ನಿಯಮಗಳ ಪ್ರಕಾರ ಸಮವಸ್ತ್ರವನ್ನು ನಿರ್ಧರಿಸುವ ಹಕ್ಕು ಖಾಸಗಿ ಶಾಲೆಗಳಿಗೆ ಇದೆ. ಈ ವಿಚಾರದಲ್ಲಿ ಮಕ್ಕಳ ಪೋಷಕರು ಆಕ್ಷೇಪಣೆ ದಾಖಲಿಸಿದರೆ ಕ್ರಮ ಕೈಗೊಳ್ಳಲಾಗುವುದು. ಈ ವಿಚಾರದಲ್ಲಿ ಎಫ್‌ಐಆರ್ ದಾಖಲಿಸುವ ಅಗತ್ಯವಿದ್ದಲ್ಲಿ ಅದನ್ನೂ ಮಾಡುವುದಾಗಿ ಅವರು ಪೋಷಕರಿಗೆ ಭರವಸೆ ನೀಡಿದ್ದಾರೆ.
ಕಟ್ಟುನಿಟ್ಟಿನ ಕ್ರಮ ಎಂದ ಕೇಂದ್ರ ರಾಜ್ಯ ಸಚಿವ ಪ್ರಹ್ಲಾದ್ ಪಟೇಲ್: ಬುಧವಾರ ತಡರಾತ್ರಿ ದಾಮೋಹ್‌ಗೆ ಆಗಮಿಸಿದ ಸಂಸದ ಮತ್ತು ಕೇಂದ್ರ ರಾಜ್ಯ ಖಾತೆ ಸಚಿವ ಪ್ರಹ್ಲಾದ್ ಪಟೇಲ್, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಘಟನೆ ದುರದೃಷ್ಟಕರ ಎಂದಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ತನಿಖೆ ನಡೆಸಿ ಈ ಬಗ್ಗೆ ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ ಎಂದು ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.
ಗೃಹ ಸಚಿವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಈ ಘಟನೆ ನಾಚಿಕೆಗೇಡಿನ ಸಂಗತಿ. ಈ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈ ಉದ್ದೇಶದ ಹಿಂದೆ ಯಾರಿದ್ದಾರೆ, ಅವರನ್ನು ಬಿಡಬಾರದು ಎಂದು ಅವರು ಒತ್ತಾಯಿಸಿದ್ದಾರೆ. ಈ ಘಟನೆ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿ ಮಯಾಂಕ್ ಅಗರ್ವಾಲ್ ಅವರು ಮೂವರು ಸದಸ್ಯರ ಉನ್ನತ ಸಮಿತಿಯನ್ನು ರಚಿಸಿದ್ದಾರೆ. ದಾಮೋಹದ ತಹಸೀಲ್ದಾರ್, ಜಿಲ್ಲಾ ಶಿಕ್ಷಣ ಸಂಯೋಜಕ ಮತ್ತು ಮುಖ್ಯ ಪುರಸಭೆ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಇವರು ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ.
ಇದನ್ನು ಓದಿ: ರಾಹುಲ್ ವಿರುದ್ಧದ ಮೋದಿ ಉಪನಾಮದ ಕೇಸ್: ಪರಿಷ್ಕರಣಾ ಅರ್ಜಿಯ ತೀರ್ಪು ಜೂ.5ರ ನಂತರ ಪ್ರಕಟ ಸಾಧ್ಯತೆ..!