ನವದೆಹಲಿ: 2002 ರ ಗುಜರಾತ್ ಗಲಭೆ ಸಂಬಂಧಿಸಿದಂತೆ ಅಂದಿನ ರಾಜ್ಯದ ಸಿಎಂ ನರೇಂದ್ರ ಮೋದಿಗೆ ವಿಶೇಷ ತನಿಖಾ ತಂಡ ( ಎಸ್ಐಟಿ) ಕ್ಲೀನ್ ಚಿಟ್ ನೀಡಿದ್ದನ್ನು ಪ್ರಶ್ನಿಸಿ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
2002ರಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಅಂದಿನ ಸಿಎಂ ಆಗಿದ್ದ ನರೇಂದ್ರ ಮೋದಿಗೆ ಕ್ಲೀನ್‌ಚಿಟ್ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಮೂರ್ತಿಗಳಾದ ಎ ಎಂ ಖಾನ್ವಿಲ್ಕರ್ ಮತ್ತು ದಿನೇಶ್ ಮಹೇಶ್ವರಿ ಅವರನ್ನೊಳಗೊಂಡ ನ್ಯಾಯಪೀಠವು ವಿಚಾರಣೆ ನಡೆಸಿ, ಅರ್ಜಿ ವಜಾಗೊಳಿಸಿದೆ.
ಕಾಂಗ್ರೆಸ್‌ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿ 69 ಮಂದಿಯನ್ನು ಬಲಿ ಪಡೆದಿದ್ದ ಗುಲ್ಬರ್ಗ್ ಸೊಸೈಟಿ ಗಲಭೆ ಕುರಿತಂತೆ ಮೋದಿ ಅವರಿಗೆ ಕ್ಲೀನ್‌ಚಿಟ್ ನೀಡಿತ್ತು. ಇದನ್ನು ಪ್ರಶ್ನಿಸಿ ಜಾಫ್ರಿ ಪತ್ನಿ, 80ರ ವೃದ್ಧೆ ಝಾಕಿರಾ ಜಾಫ್ರಿ ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿ ಈ ನಿರ್ಧಾರ ಪ್ರಕಟಿಸಿದೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮೋದಿ ಅವರು ಗಲಭೆ ತಡೆಯಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ತೆಗೆದುಕೊಂಡಿದ್ದರು ಎಂದು 2012ರಲ್ಲಿ ವಿಶೇಷ ತನಿಖಾ ತಂಡ ವರದಿ ನೀಡಿತ್ತು. ಹೀಗಾಗಿ ಮೋದಿ ವಿರುದ್ಧ ಝಾಕಿಯಾ ಜಾಫ್ರಿ ಸಲ್ಲಿಸಿದ್ದ ಅರ್ಜಿಯನ್ನು ಅದೇ ವರ್ಷ ಗುಜರಾತಿನ ಮೆಟ್ರೋಪಾಲಿಟನ್ ಮ್ಯಾಜಿಸ್ಪ್ರೇಟ್ ನ್ಯಾಯಾಲಯ ವಜಾಗೊಳಿಸಿತ್ತು.
ಇದರ ವಿರುದ್ಧ ಝಾಕಿಯಾ ಗುಜರಾತ್ ಹೈಕೋರ್ಟ್ ಮೊರೆ ಹೋಗಿದ್ದರು. ಮೋದಿ, ಇತರೆ ರಾಜಕಾರಣಿಗಳು ಹಾಗೂ ಹಿರಿಯ ಅಧಿಕಾರಿಗಳು ಸೇರಿ 58 ಆರೋಪಿಗಳನ್ನು ವಿಚಾರಣೆ ನಡೆಸಲು ವಿಚಾರಣಾ ಯೋಗ್ಯ ಸಾಕ್ಷ್ಯವಿಲ್ಲ ಎಂದು ಹೇಳಿದ್ದ ಹೈಕೋರ್ಟ್ ಝಾಕಿಯಾ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಝಾಕಿಯಾ ಸುಪ್ರೀಂಕೋರ್ಟಿನಲ್ಲಿ ಪ್ರಶ್ನೆ ಮಾಡಿದ್ದರು.
ಇದನ್ನೂ ಓದಿ: ಗೋಧ್ರಾ ಹತ್ಯಾಕಾಂಡ: ಮೋದಿಗೆ ನೀಡಿದ್ದ ಕ್ಲೀನ್‌ಚಿಟ್ ಪ್ರಶ್ನಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ..