ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿರುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ಮುಖ್ಯ ನ್ಯಾಯಮೂರ್ತಿ ಯು.ಯು ನೇತೃತ್ವದ ಪೀಠದ ಮುಂದೆ ಮುಸ್ಲಿಂ ಬೋರ್ಡ್ ಪರ ಹಿರಿಯ ವಕೀಲ ಕಪಿಲ್ ಸಿಬಲ್ ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಅರ್ಜಿ ಸಲ್ಲಿಸಿ ವಾದ ಮಂಡಿಸಿದರು. ಈ ಸಂಬಂಧದ ವಿಷಯದ ತುರ್ತು ವಿಚಾರಣೆ ನಡೆಸುವಂತೆ ಮನವಿ ಮಾಡಿದರು. ಈದ್ಗಾ ಮೈದಾನದ ವಿಚಾರವಾಗಿ ಅನಗತ್ಯ ಧಾರ್ಮಿಕ ಉದ್ವಿಗ್ನತೆ ಸೃಷ್ಟಿಸಲಾಗುತ್ತಿದೆ ಎಂದು ಸಿಬಲ್ ದೂರಿದರು.
ಈ ಬಗ್ಗೆ ಅರ್ಜಿದಾರರ ಪರ ಮನವಿಯನ್ನು ಆಲಿಸಿದ ಕೋರ್ಟ್ ಮಂಗಳವಾರ ಈ ಅರ್ಜಿಯ ವಿಚಾರಣೆ ನಡೆಸಲು ಒಪ್ಪಿಕೊಂಡಿತು. ಕಳೆದ ವಾರ ಈ ಬಗೆಗಿನ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಅನುಮತಿ ನೀಡಿತ್ತು.
ಮೈದಾನದಲ್ಲಿ ಉತ್ಸವಕ್ಕೆ ಅನುಮತಿ ನೀಡಲು ಸರ್ಕಾರವು ತನ್ನದೇ ನಿರ್ಧಾರ ಕೈಗೊಳ್ಳಬಹುದು ಎಂದು ಹೈಕೋರ್ಟ್ ಹೇಳಿತ್ತು. ಈ ಮೊದಲು ಮುಸ್ಲಿಂ ಬೋರ್ಡ್ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆಗಸ್ಟ್ 25ರಂದು ನೀಡಿದ್ದ ಮಧ್ಯಂತರ ಆದೇಶ ನೀಡಿತ್ತು. ಆದರೆ ಹೈಕೋರ್ಟ್ನ ಮಧ್ಯಂತರ ಆದೇಶ ಪ್ರಶ್ನಿಸಿ ಹಿಂದೂ ಪರ ಸಂಘಟನೆಗಳು ಸಲ್ಲಿಕೆ ಮಾಡಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್ ಆಚರಣೆಗೆ ಅನುಮತಿ ನೀಡಿತ್ತು.
ಆಗಸ್ಟ್ 31 ರಿಂದ ಸೀಮಿತ ಅವಧಿಗೆ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವ ಸಂಬಂಧ ರಾಜ್ಯ ಸರ್ಕಾರಕ್ಕೆ ನಿರ್ಧಾರ ಕೈಗೊಳ್ಳುವ ಆದೇಶ ನೀಡಿತ್ತು.
ಇದನ್ನು ಓದಿ:ಹಿಂದೂ ದೇಗುಲಗಳ ಮೇಲೆ ಕಮ್ಯೂನಿಸ್ಟ್ ಸರ್ಕಾರಗಳ ಹಿಡಿತ: ನಿವೃತ್ತ ನ್ಯಾ. ಇಂದು ಮಲ್ಹೋತ್ರಾ