ನವದೆಹಲಿ: 1984ರಲ್ಲಿ ಸಂಭವಿಸಿದ್ದ ಭೋಪಾಲ್ ಅನಿಲ ದುರಂತದ ಸಂತ್ರಸ್ತರಿಗೆ ಸದ್ಯ ಡೌ ಕೆಮಿಕಲ್ಸ್ ಒಡೆತನದಲ್ಲಿರುವ ಯುಎಸ್ ಮೂಲದ ಯೂನಿಯನ್ ಕಾರ್ಬೈಡ್ ಕಾರ್ಪೋರೇಷನ್ ಸಂಸ್ಥೆಯಿಂದ 7,000 ಕೋಟಿ ರೂ.ಗೂ ಅಧಿಕ ಹೆಚ್ಚಿನ ಪರಿಹಾರ ನೀಡಬೇಕು ಎಂದು ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಕ್ಯುರೇಟಿವ್ ಮನವಿಯನ್ನು ಇಂದು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಭೋಪಾಲ್ ಅನಿಲ ದುರಂತ 3,000ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದ್ದು ಮಾತ್ರವಲ್ಲದೆ, ಪರಿಸರಕ್ಕೂ ಅಪಾರ ಹಾನಿಯನ್ನುಂಟು ಮಾಡಿತ್ತು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಅಭಯ್ ಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆ ಕೆ ಮಹೇಶ್ವರಿ ಅವರಿದ್ದ ಪೀಠ ಸರ್ವಾನುಮತದಿಂದ, 2010ರಲ್ಲಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿತು. ಈ ವಾದದಲ್ಲಿ ಯಾವುದೇ ಕಾನೂನು ತತ್ವಗಳ ಅಡಿಪಾಯ ಇಲ್ಲ. ಪರಿಹಾರ ಇತ್ಯರ್ಥವಾದ ದಶಕಗಳ ನಂತರ ಮತ್ತೆ ಮನವಿಯನ್ನು ವಿಚಾರಣೆಗೊಳಪಡಿಸಿ, ಮುನ್ನೆಲೆಗೆ ತರುವುದು ಅನೇಕ ತೊಂದರೆಗಳು ಮತ್ತು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ ಎಂದು ಪೀಠ ಹೇಳಿದೆ.
ಇತ್ಯರ್ಥದ ದಶಕಗಳ ನಂತರ ಯಾವುದೇ ಸರಿಯಾದ ತರ್ಕವನ್ನು ಒದಗಿಸದೆ ಕೇಂದ್ರ ಸರ್ಕಾರ ಸಮಸ್ಯೆಯನ್ನು ಮತ್ತೆ ತರಾಟೆಗೆ ತೆಗೆದುಕೊಂಡಿರುವ ಬಗ್ಗೆಯೂ ಪೀಠ ಅಸಮಾಧಾನ ವ್ಯಕ್ತಪಡಿಸಿತು. ವಂಚನೆಯ ಆಧಾರದ ಮೇಲೆ ಪರಿಹಾರವನ್ನು ಬದಿಗಿರಿಸಬಹುದು. ಆದರೆ ಅಂತಹ ಯಾವುದೇ ವಿಷಯ ಕುರಿತು ಕೇಂದ್ರ ಸರ್ಕಾರ ಮನವಿ ಮಾಡಿಲ್ಲ. ಪರಿಹಾರದ ಕೊರತೆಯನ್ನು ಸರಿಪಡಿಸುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಸಂತ್ರಸ್ತರಿಗೆ ವಿಮಾ ಪಾಲಿಸಿಗಳನ್ನು ತೆಗೆದುಕೊಳ್ಳುವಲ್ಲಿಯೂ ಸರ್ಕಾರದ ಕಡೆಯಿಂದ ಸಂಪೂರ್ಣ ನಿರ್ಲಕ್ಷ್ಯ ಕಂಡುಬಂದಿದೆ ಎಂದೂ ನ್ಯಾಯಾಲಯ ಹೇಳಿದೆ.
ಸಂತ್ರಸ್ತರ ಎಲ್ಲಾ ಕ್ಲೈಮ್‌ಗಳನ್ನು ಇತ್ಯರ್ಥಪಡಿಸಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್ ಪಾವತಿಸಿದ ಮೊತ್ತವು ಸಾಕಾಗುತ್ತದೆ ಎಂದು ಕೇಂದ್ರವು ಈ ಹಿಂದೆಯೇ ಹೇಳಿದೆ ಮತ್ತು 50 ಕೋಟಿ ರೂಪಾಯಿಗಳು ಇನ್ನೂ ಬಳಕೆಯಾಗದೆ ಉಳಿದಿರುವುದರಿಂದ ಕೇಂದ್ರದ ಮನವಿಯಲ್ಲಿ ಯಾವುದೇ ಹುರುಳಿಲ್ಲ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಳಿ ಇರುವ 50 ಕೋಟಿ ರೂಪಾಯಿಗಳ ಮೊತ್ತವನ್ನು ಭಾರತ ಸರ್ಕಾರವು ಬಾಕಿ ಉಳಿದಿರುವ ಕ್ಲೈಮ್‌ಗಳನ್ನು ಪೂರೈಸಲು ಬಳಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಯೂನಿಯನ್ ಕಾರ್ಬೈಡ್‌ನ ಉತ್ತರಾಧಿಕಾರಿ ಸಂಸ್ಥೆಗಳ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ಕೇಂದ್ರದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಂತ್ರಸ್ತರ ಪರ ಹಿರಿಯ ವಕೀಲ ಸಂಜಯ್ ಪಾರಿಖ್ ಮತ್ತು ವಕೀಲ ಕರುಣಾ ನುಂಡಿ ಅವರ ವಾದಗಳನ್ನು ಆಲಿಸಿದ್ದ ಸುಪ್ರೀಂ ಕೋರ್ಟ್ ಜನವರಿ 12 ರಂದು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
1989 ರಲ್ಲಿ ಒಪ್ಪಂದದ ಭಾಗವಾಗಿ ಅಮೆರಿಕನ್ ಕಂಪನಿಯಿಂದ ಪಡೆದ $470 ಮಿಲಿಯನ್ (ರೂ. 715 ಕೋಟಿ) ಗಿಂತ ಹೆಚ್ಚು ಅಂದರೆ ಇನ್ನೂ ಹೆಚ್ಚಿನ 7,844 ಕೋಟಿ ರೂ. ನಷ್ಟು ಪರಿಹಾರ ಹಣವನ್ನು ಯುಎಸ್ ಮೂಲದ ಯುಸಿಸಿಯ ಉತ್ತರಾಧಿಕಾರಿ ಸಂಸ್ಥೆ ನೀಡಬೇಕು ಎಂದು ಕೇಂದ್ರ ಕೋರಿತ್ತು.
2010 ರಲ್ಲಿ ಸಲ್ಲಿಸಿದ ತನ್ನ ಕ್ಯುರೇಟಿವ್ ಮನವಿಯಲ್ಲಿ, USD 470 ಮಿಲಿಯನ್ ಪರಿಹಾರವನ್ನು ನಿಗದಿಪಡಿಸಿದ್ದ 1989ರ ಫೆಬ್ರುವರಿ 14ರ ಸುಪ್ರೀಂ ಕೋರ್ಟ್ ತೀರ್ಪು ಗಂಭೀರವಾಗಿ ದರ್ಬಲಗೊಂಡಿದೆ ಎಂದು ಹೇಳಿ, ಅದನ್ನು ಮರು ಪರಿಶೀಲನೆ ಮಾಡುವಂತೆ ಕೇಂದ್ರ ಸರ್ಕಾರ ವಾದಿಸಿತ್ತು. 1989 ರಲ್ಲಿ ನಿರ್ಧರಿಸಲಾದ ಪರಿಹಾರವನ್ನು ವಾಸ್ತವಗಳಿಗೆ ಸಂಬಂಧಿಸದ ಸತ್ಯದ ಊಹೆಯ ಆಧಾರದ ಮೇಲೆ ತಲುಪಿಸಲಾಗಿದೆ ಎಂಬುದು ಕೇಂದ್ರ ಸರ್ಕಾರದ ವಾದವಾಗಿತ್ತು. ಈ ಸಂಬಂಧ 2011ರಲ್ಲಿ ನ್ಯಾಯಾಲಯ ನೋಟಿಸ್ ನೀಡಿತ್ತು.
ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಯನ್ನು ವಿರೋಧಿಸಿದ ಕಂಪನಿಯು, ಮರುಪರಿಶೀಲನಾ ಅರ್ಜಿಯನ್ನು ನಿರ್ಧರಿಸಿದ 19 ವರ್ಷಗಳ ನಂತರ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಲಾಗಿದೆ. ವ್ಯಾಜ್ಯಕ್ಕೆ ಒಂದು ಕೊನೆ ಇರಬೇಕು ಎಂದು ವಾದಿಸಿತ್ತು.
ಇದನ್ನೂ ಓದಿ: 'ಭೋಪಾಲ್ ಅನಿಲ ದುರಂತ' ಕ್ಕೆ 35 ವರ್ಷ.. ಸಿಕ್ಕಿತಾ ನೊಂದವರಿಗೆ ನ್ಯಾಯ...?