ನವದೆಹಲಿ: ಕರ್ನಾಟಕದಿಂದ 24,000 ಕ್ಯೂಸೆಕ್ ಕಾವೇರಿ ನೀರು ಬಿಡಲು ನಿರ್ದೇಶನ ನೀಡುವಂತೆ ಕೋರಿ ತಮಿಳುನಾಡು ಸರಕಾರ ಸಲ್ಲಿಸಿರುವ ಮನವಿಗೆ ಯಾವುದೇ ಆದೇಶ ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಸೋಮವಾರ ಕಾವೇರಿ ನದಿ ನೀರು ಪ್ರಾಧಿಕಾರದ ಸಭೆ ನಿಗದಿಪಡಿಸಲಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಪೀಠದ ಗಮನಕ್ಕೆ ತಂದರು. ಆ ಬಳಿಕ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ತ್ರಿಸದಸ್ಯ ಪೀಠವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದಿಂದ (ಸಿಡಬ್ಲ್ಯೂಎಂಎ) ಕರ್ನಾಟಕ ಬಿಡುಗಡೆ ಮಾಡಿರುವ ನೀರಿನ ಪ್ರಮಾಣದ ಬಗ್ಗೆ ವರದಿ ನೀಡುವಂತೆ ಪ್ರಾಧಿಕಾರಕ್ಕೆ ಸೂಚನೆ ನೀಡಿತು.
ಈ ವಿಷಯದಲ್ಲಿ ನಮಗೆ ಯಾವುದೇ ಪರಿಣತಿ ಇಲ್ಲ. ಮುಂದಿನ ಹದಿನೈದು ದಿನಗಳ ಕಾಲ ನೀರು ಹರಿಸುವುದನ್ನು ನಿರ್ಧರಿಸಲು ಸೋಮವಾರ ಪ್ರಾಧಿಕಾರ ಸಭೆ ನಡೆಸುತ್ತಿದೆ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಇದೇ ವೇಳೆ ಕೋರ್ಟ್‌ಗೆ ಮಾಹಿತಿ ನೀಡಿದರು. ನೀರು ಬಿಡಲು ನೀಡಿರುವ ನಿರ್ದೇಶನಗಳನ್ನು ಪಾಲಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು ಸಿಡಬ್ಲ್ಯೂಎಂಎ ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತ ಎಂದು ನಾವು ಕಂಡುಕೊಂಡಿದ್ದೇವೆ ಎಂದು ನ್ಯಾಯಮೂರ್ತಿಗಳಾದ ಪಿಎಸ್ ನರಸಿಂಹ ಮತ್ತು ಪಿಕೆ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿತು. ತಮಿಳುನಾಡು ಪರ ಹಿರಿಯ ವಕೀಲ ಮುಕುಲ್ ರೋಹಟಗಿ ಹಾಗೂ ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿದರು.
ಸಿಡಬ್ಲ್ಯುಎಂಎ ನಿಗದಿಪಡಿಸಿದ ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಕರ್ನಾಟಕ ಹೇಳಿದೆ. ಆದರೆ, ತಮಿಳುನಾಡಿಗೆ ತಲುಪಲು ಮೂರು ದಿನಗಳ ಸಮಯ ತೆಗೆದುಕೊಳ್ಳುತ್ತದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ಪ್ರಾಧಿಕಾರ ಆದೇಶ ಹೊರಡಿಸಿದ್ದರೂ ಕರ್ನಾಟಕ ನೀರು ಹರಿಸಿಲ್ಲ ಎಂಬ ತಮಿಳುನಾಡಿನ ವಾದವನ್ನೂ ಸುಪ್ರೀಂ ಕೋರ್ಟ್ ಗಮನಿಸಿದೆ. ಕರ್ನಾಟಕ ಸರ್ಕಾರದ ಪರ ವಕೀಲರು ಇದು ಸಂಕಷ್ಟದ ವರ್ಷವಾಗಿದ್ದು, ಮಳೆಯ ಕೊರತೆಯಿದೆ ಎಂದು ವಾದಿಸಿದರು.
ಆಗಸ್ಟ್ 11 ರಂದು ಪ್ರಾಧಿಕಾರವು ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣವನ್ನು 15,000 ಕ್ಯೂಸೆಕ್ನಿಂದ 10,000 ಕ್ಯೂಸೆಕ್ಗೆ ಇಳಿಸಿದೆ. ಇದರಿಂದ ತಮಿಳುನಾಡಿನಲ್ಲಿ ಬೆಳೆಯ ಮೇಲೆ ಪರಿಣಾಮ ಬೀರಿದೆ ಎಂದು ತಮಿಳುನಾಡು ಪರ ವಕೀಲರು ವಾದಿಸಿದರು. ‘ನೀವು ಪ್ರಾಧಿಕಾರದ ಮುಂದೆ ಏಕೆ ಹೋಗಬಾರದು. ನಮಗೆ ಇದರಲ್ಲಿ ಪರಿಣಿತಿ ಇಲ್ಲ’ ಎಂದು ಪೀಠವು ವಕೀಲರಿಗೆ ಹೇಳಿತು.
ಕೇಂದ್ರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯ ಭಾಟಿ, ಮುಂದಿನ ಹದಿನೈದು ದಿನಗಳವರೆಗೆ ನೀರು ಬಿಡಲು ನಿರ್ಧರಿಸಲು ಪ್ರಾಧಿಕಾರವು ಸೋಮವಾರ ಸಭೆಯನ್ನು ನಿಗದಿಪಡಿಸಿದೆ ಎಂದು ಹೇಳಿದರು. ವಕೀಲರ ವಾದ ಆಲಿಸಿದ ನಂತರ, ಉನ್ನತ ನ್ಯಾಯಾಲಯವು "ನೀರಿನ ಬಿಡುಗಡೆಗೆ ನೀಡಲಾದ ನಿರ್ದೇಶನಗಳನ್ನು ಅನುಸರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಕುರಿತು CWMA ತನ್ನ ವರದಿಯನ್ನು ಸಲ್ಲಿಸುವುದು ಸೂಕ್ತವೆಂದು ನಾವು ಕಂಡುಕೊಂಡಿದ್ದೇವೆ" ಎಂದು ಹೇಳಿತು.
ಈ ಆದೇಶವನ್ನು ಪ್ರಾಧಿಕಾರಕ್ಕೆ ತಿಳಿಸುವಂತೆ ಮತ್ತು ಮುಂದಿನ ಶುಕ್ರವಾರದೊಳಗೆ ವರದಿಯನ್ನು ನಮಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಎಸ್‌ಜಿಗೆ ಹೇಳಿದೆ. ಅಧಿಕಾರಿಗಳ ಆದೇಶಗಳು ತನ್ನ ಹಿತಾಸಕ್ತಿಗೆ ವ್ಯತಿರಿಕ್ತವಾಗಿದೆ ಎಂದು ಕರ್ನಾಟಕ ಸರ್ಕಾರ ವಾದಿಸಿದೆ ಮತ್ತು ಹಂಚಿಕೆ ಮಾಡಿದ ಪಾಲನ್ನು ಕಡಿಮೆ ಮಾಡಲು ಅರ್ಜಿ ಸಲ್ಲಿಸಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. ನೀರಿನ ಹಂಚಿಕೆಯಲ್ಲಿ ಹೆಚ್ಚಳವಾಗಬೇಕು ಎಂಬ ತಮಿಳುನಾಡಿನ ವಾದವನ್ನು ಸುಪ್ರೀಂ ಕೋರ್ಟ್ ಕೂಡ ಗಮನಿಸಿದೆ. “ಇದನ್ನು ಅಧಿಕಾರಿಗಳು ನಿರ್ಧರಿಸಲಿ. ಮುಂದಿನ ಶುಕ್ರವಾರ ಪ್ರಕರಣ ಪಟ್ಟಿ ಮಾಡಲಾಗುವುದು”ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.
ಬೆಳೆದು ನಿಂತಿರುವ ಬೆಳೆಗಳಿಗೆ ನಿತ್ಯ 24,000 ಕ್ಯೂಸೆಕ್ ಕಾವೇರಿ ನೀರನ್ನು ಬಿಡುಗಡೆ ಮಾಡುವಂತೆ ಸುಪ್ರೀಂಕೋರ್ಟ್‌ಗೆ ನಿರ್ದೇಶನ ಕೋರಿ ತಮಿಳುನಾಡು ಮಾಡಿದ ಮನವಿಯನ್ನು ಕರ್ನಾಟಕ ಸರ್ಕಾರ ಸಂಪೂರ್ಣ ತಪ್ಪು ಕಲ್ಪನೆಯಿಂದ ಕೂಡಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಹೇಳಿದೆ.
ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಏನಿದೆ?: ಕಾವೇರಿ ನದಿ ನೀರು ವಿವಾದ ಸಂಬಂಧ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಳ್ಳುವ ಮುನ್ನಾದಿನ ಕರ್ನಾಟಕ ಸರ್ಕಾರ ಅಫಿಟವಿಟ್ ಸಲ್ಲಿಸಿತ್ತು. ಬಿಳಿಗುಂಡ್ಲುವಿನ ಅಂತಾರಾಜ್ಯ ಗಡಿಯಲ್ಲಿ ಮೇಕೆದಾಟು ಸಮತೋಲನ ಜಲಾಶಯ-ಕುಡಿಯುವ ನೀರಿನ ಯೋಜನೆ ನಿರ್ಮಾಣಕ್ಕೆ ತಮಿಳುನಾಡಿನ ಅನಗತ್ಯ ವಿರೋಧದಿಂದ ಈ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಕರ್ನಾಟಕ ಅಫಿಟವಿಟ್‌ನಲ್ಲಿ ಉಲ್ಲೇಖಿಸಿದೆ.
ಸಾಮಾನ್ಯ ಮಳೆ ವರ್ಷಕ್ಕೆ ನಿಗದಿಪಡಿಸಿದ ನೀರು ಬಿಡುಗಡೆಯ ಪ್ರಕಾರ, ಜೂನ್ನಲ್ಲಿ 9.19 ಟಿಎಂಸಿ, ಜುಲೈನಲ್ಲಿ 31.24 ಟಿಎಂಸಿ, ಆಗಸ್ಟ್ನಲ್ಲಿ 45.95 ಟಿಎಂಸಿ, ಸೆಪ್ಟೆಂಬರ್ನಲ್ಲಿ 36.76 ಟಿಎಂಸಿ, ಅಕ್ಟೋಬರ್ನಲ್ಲಿ 20.22 ಟಿಎಂಸಿ, ನವೆಂಬರ್ನಲ್ಲಿ 13.78 ಟಿಎಂಸಿ, ಡಿಸೆಂಬರ್ನಲ್ಲಿ 7.35 ಟಿಎಂಸಿ, ಜನವರಿಯಲ್ಲಿ 2.76 ಟಿಎಂಸಿ ಹಾಗೂ ಫೆಬ್ರವರಿಯಲ್ಲಿ 2.5 ಟಿಎಂಸಿ ಸೇರಿ ಮೇ ತಿಂಗಳವರೆಗೆ ಒಟ್ಟು 177.25 ಟಿಎಂಸಿ ನೀರನ್ನು ಬಿಡುಗಡೆ ಮಾಡಬೇಕು. ಇದಕ್ಕಾಗಿ ತಮಿಳುನಾಡು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಕರ್ನಾಟಕ ಸರ್ಕಾರ ವಿವರಿಸಿದೆ.
ನೀರು ಹರಿವಿನ ಕೊರತೆಗೆ ಅನ್ವಯಿಸಿದರೆ, ಕರ್ನಾಟಕದ ಕನಿಷ್ಠ ಬೆಳೆ ನೀರಿನ ಅವಶ್ಯಕತೆ ಸುಮಾರು 140 ಟಿಎಂಸಿ ಆಗಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಜಲಾಶಯಗಳ ಸಂಗ್ರಹ ಮತ್ತು ಒಳಹರಿವನ್ನು ಗಮನಕ್ಕೆ ತೆಗೆದುಕೊಂಡಲ್ಲಿ, ಕರ್ನಾಟಕದ ಬೆಳೆಗಳಿಗೆ ಮತ್ತು ಬೆಂಗಳೂರು ನಗರ ಸೇರಿದಂತೆ ಇತರ ಪಟ್ಟಣಗಳು ಮತ್ತು ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳನ್ನು ಪೂರೈಸಲು ಈಗಿರುವ ನೀರಿನ ಸಂಗ್ರಹ ಸಾಕಾಗದು ಎಂದು ಹೇಳಿದೆ.
ತಮಿಳುನಾಡು ಸದ್ಯದ ಪರಿಸ್ಥಿತಿಯನ್ನು ಸಾಮಾನ್ಯ ಮಳೆ ವರ್ಷದಂತೆಯೇ ಭಾವಿಸಿದೆ. ಸಂಕಷ್ಟದ ವರ್ಷವಲ್ಲ ಎಂಬ ತಪ್ಪು ಊಹೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ದಾಖಲಿಸಿರುವಂತೆ ತಮಿಳುನಾಡಿನಲ್ಲಿ ಮಳೆಯ ಪ್ರಮಾಣವು ಶೇ.25ರಷ್ಟು ಕಡಿಮೆಯಾಗಿದೆ. ಕರ್ನಾಟಕದ ನಾಲ್ಕು ಜಲಾಶಯಗಳ ಒಳಹರಿವು 2023ರ ಆಗಸ್ಟ್ 9ರವರೆಗೆ ಶೇ.42.5ರಷ್ಟು ಕಡಿಮೆ ಇದೆ ಎಂದು ಅಫಿಡವಿಟ್‌ನಲ್ಲಿ ಕರ್ನಾಟಕ ಉಲ್ಲೇಖಿಸಿದೆ.
ಈ ಮಳೆ ವರ್ಷದ ಆರಂಭದಲ್ಲಿ ತಮಿಳುನಾಡು 69.777 ಟಿಎಂಸಿ (01.06.2023ರಂತೆ) ನೀರು ಸಂಗ್ರಹ ಹೊಂದಿತ್ತು. ಕರ್ನಾಟಕವು 22.08.2023ರವರೆಗೆ 26.768 ಟಿಎಂಸಿ ನೀರು ಹರಿಸಿದೆ. ಹೀಗಾಗಿ ತಮಿಳುನಾಡಿನಲ್ಲಿ ಒಟ್ಟು 96.545 ಟಿಎಂಸಿ ನೀರು ಇರಬೇಕಿತ್ತು. ಆದಾಗ್ಯೂ, ತಮಿಳುನಾಡು ಕೇವಲ 21.655 ಟಿಎಂಸಿ (22.08.2023ರಂತೆ) ನೇರ ಸಂಗ್ರಹ ಉಳಿಸಿಕೊಂಡಿದೆ. ಒಟ್ಟು 69.777 ಟಿಎಂಸಿ ನೀರು ಹರಿಸಿದೆ. ಟ್ರಿಬ್ಯೂನಲ್ ನಿಗದಿಪಡಿಸಿದ 1.851 ಲಕ್ಷ ಎಕರೆಯ ಮಿತಿಯನ್ನೂ ಮೀರಿ ಹೆಚ್ಚಿನ ಪ್ರದೇಶದಲ್ಲಿ ಕೃಷಿ ಮಾಡಲು ತಮಿಳುನಾಡು ಅಧಿಕ ನೀರು ಹರಿಸಿದೆ. ಆದ್ದರಿಂದ, ಕಾವೇರಿ ಜಲವಿವಾದ ನ್ಯಾಯಾಧಿಕರಣದ ಅಂತಿಮ ಆದೇಶದ ಷರತ್ತು-X ಅನ್ನು ಉಲ್ಲಂಘಿಸಿ ತಮಿಳುನಾಡು 69.777 ಟಿಎಂಸಿಯಷ್ಟು ನೀರನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಅಫಿಡವಿಟ್‌ನಲ್ಲಿ ಕರ್ನಾಟಕ ಹೇಳಿದೆ.
ಓದಿ: ಕಾವೇರಿ ನೀರು ಬಿಡುಗಡೆಗೆ ತಮಿಳುನಾಡು ಒತ್ತಾಯಿಸುವಂತಿಲ್ಲ: ಸುಪ್ರೀಂ ಕೋರ್ಟ್‌ಗೆ ಕರ್ನಾಟಕ ಸರ್ಕಾರದ ಅಫಿಡವಿಟ್