ಕೋಲ್ಕತ್ತಾ : 64 ವರ್ಷದ ವಿಧವೆ ಹಾಗೂ ಆಕೆಯ ಮಗಳು ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡಕ್ಕೆ ಮಣಿಯದೇ ಪೂರ್ವಜರ ಆಸ್ತಿಗೆ ಸಂಬಂಧಿಸಿದ ಎರಡು ಪ್ರಕರಣಗಳ ತನಿಖೆಯನ್ನು ಮುಂದುವರಿಸಿ, ಅದರಲ್ಲಿ ಏನಾದರೂ ಹಸ್ತಕ್ಷೇಪ ನಡೆದಿದೆಯೇ ಎಂಬುದನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆಗೆ (ಸಿಐಡಿ) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಸಂಜೀವ್ ಖನ್ನಾ ಹಾಗೂ ನ್ಯಾಯಮೂರ್ತಿ ಎಸ್. ವಿ. ಎನ್. ಭಟ್ಟಿ ಅವರಿದ್ದ ಪೀಠ ಸೋಮವಾರ ವಿಧವೆ ತಾಯಿ ಹಾಗೂ ಮಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿ, ಈ ತೀರ್ಪು ನೀಡಿತು. ಕಲ್ಕತ್ತಾ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರ ಪತಿ, ವಕೀಲ ಪ್ರೊತಾಪ್ ಚಂದ್ರ ಡೇ ಕ್ರಿಮಿನಲ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ ತಾಯಿ ಮಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ವಕೀಲ ಪ್ರೊತಾಪ್ ಚಂದ್ರ ಡೇ ಹಾಗೂ ಅವರ ಪತ್ನಿ ನ್ಯಾಯಮೂರ್ತಿ ಅಮೃತಾ ಸಿನ್ಹಾ ಅವರು ತಮ್ಮ ಸ್ಥಾನ ದುರಪಯೋಗಪಡಿಸಿಕೊಂಡಿದ್ದಾರೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ತಮ್ಮ ಸಂಬಂಧಿಕರ ವಿರುದ್ಧ ಅರ್ಜಿದಾರರು ದಾಖಲಿಸಿರುವ ಎರಡು ಕ್ರಿಮಿನಲ್ ಪ್ರಕರಣಗಳ ತನಿಖೆಯಲ್ಲಿ ವಕೀಲ್ ಪ್ರೊತಾಪ್ ಚಂದ್ರ ಡೇ ಹಸ್ತಕ್ಷೇಪ ಮಾಡಿದ್ದಾರೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇದೀಗ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಡಿಸೆಂಬರ್ಗೆ ಮುಂದೂಡಿದ್ದು, ಮುಂದಿನ ವಿಚಾರಣೆ ವೇಳೆ ಮುಚ್ಚಿದ ಕವರ್ನಲ್ಲಿ ತನಿಖೆಯ ಸ್ಥಿತಿಗತಿ ವರದಿ ಸಲ್ಲಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸೂಚಿಸಿದೆ.
ತನಿಖೆಯ ಸ್ಥಿತಿಗತಿ ಹಾಗೂ ಮಾಡಿರುವ ಆರೋಪಗಳ ಬಗ್ಗೆ ಈ ಹಿಂದೆಯೇ ಕಲ್ಕತ್ತಾ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ವರದಿ ಕಳುಹಿಸಲಾಗಿತ್ತು. ಅರ್ಜಿದಾರರ ಆರೋಪಗಳನ್ನು ಎಚ್ಚರಿಕೆಯಿಂದಲೇ ಪರಿಗಣಿಸಿರುವ ರಾಜ್ಯ ಸರ್ಕಾರ ನ್ಯಾಯಯುತವಾಗಿಯೇ ತನಿಖೆಯನ್ನು ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರದ ಪರ ವಕೀಲರಾದ ಸುನಿಲ್ ಫೆರ್ನಾಂಡಿಸ್ ಹಾಗೂ ಆಸ್ತಾ ಶರ್ಮಾ ವಾದ ಮಂಡಿಸಿದರು.
ಅರ್ಜಿದಾರ ಮಗಳು, ತಮ್ಮ ತಂದೆಯ ಮರಣದ ನಂತರ ಆಸ್ತಿಯ ಒಂದು ಭಾಗವನ್ನು ವಿಧವೆಯಾದ ತಾಯಿ ಹೆಸರಿಗೆ ವರ್ಗಾಯಿಸಲಾಗಿದೆ. ಆದರೂ ಆಕೆಯ ಅಣ್ಣ ಹಾಗೂ ಆತನ ಕುಟುಂಬ ಅವಳನ್ನು ಆಸ್ತಿಯಿಂದ ಹೊರಹಾಕಲು ಪ್ರಯತ್ನಿಸುತ್ತಿದೆ. ಮಾತ್ರವಲ್ಲದೇ ಆಸ್ತಿಯನ್ನು ಬಿಟ್ಟುಕೊಡುವಂತೆ ವಿಧವೆಗೆ ಹಲವಾರು ಬಾರಿ ಬೆದರಿಕೆ ಹಾಕಲಾಗಿದೆ ಮತ್ತು ದೈಹಿಕವಾಗಿಯೂ ಥಳಿಸಲಾಗಿದೆ. ಇದು ಸಿಸಿಟಿವಿ ಕ್ಯಾಮರಾಗಳಲ್ಲೂ ಸೆರೆಯಾಗಿತ್ತು. ಹಾಗಾಗಿ ವಿಧವೆಯಾಗಿರುವ ತಾಯಿ ತಮ್ಮ ಸಂಬಂಧಿಕರ ವಿರುದ್ಧ ಎರಡು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದ್ದಾರೆ. ಈಗ ಆ ಸಂಬಂಧಿಕರು ವಕೀಲ ಪ್ರೊತಾಪ್ ಚಂದ್ರ ಡೇ ಅವರನ್ನು ತೊಡಗಿಸಿಕೊಂಡಿದ್ದು, ಅವರು ತನಿಖಾ ಸಂಸ್ಥೆ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ, ಸುಪ್ರೀಂ ಕೋರ್ಟ್ಗೆ ಮನವಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ಸಂಜಯ್ ಹೆಗ್ಡೆ ಹಾಗೂ ನೀನಾ ನಾರಿಮನ್ ವಾದ ಮಂಡಿಸಿದರು.
ಇದನ್ನೂ ಓದಿ : ವಿಧೇಯಕಗಳಿಗೆ ಅಂಕಿತ ಹಾಕಲು ವಿಳಂಬ: ರಾಜ್ಯಪಾಲರುಗಳ ನಡೆಗೆ ಸುಪ್ರೀಂ ಕೋರ್ಟ್ ಗರಂ