ನವದೆಹಲಿ: ವಿಚಾರಣೆ ನಡೆಸುವ ಮತ್ತು ಬಂಧಿಸುವ ಅಧಿಕಾರ ಹೊಂದಿರುವ ಸಿಬಿಐ, ಇಡಿ ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ತನಿಖಾ ಸಂಸ್ಥೆಗಳ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮರಾಗಳು ಮತ್ತು ರೆಕಾರ್ಡಿಂಗ್ ಉಪಕರಣಗಳನ್ನು ಅಳವಡಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ನಿರ್ದೇಶನ ನೀಡಿದೆ.
ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ನೇತೃತ್ವದ ನ್ಯಾಯಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದಿದೆ.
ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳು, ಮುಖ್ಯ ಗೇಟ್, ಎಲ್ಲಾ ಲಾಕಪ್ಗಳು, ಎಲ್ಲಾ ಕಾರಿಡಾರ್, ಲಾಬಿ ಮತ್ತು ಮತ್ತು ಲಾಕಪ್ ಕೋಣೆಯ ಹೊರಗಿನ ಪ್ರದೇಶಗಳಲ್ಲೂ ಸಿಸಿಕ್ಯಾಮರಾ ಅಳವಡಿಸುವಂತೆ ತಿಳಿಸಿದೆ.
ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪರಿಶೀಲಿಸಲು ಈ ಹಿಂದೆ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲು ಆದೇಶಿಸಿದ್ದ ಸುಪ್ರೀಂಕೋರ್ಟ್, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ, ಕಂದಾಯ ಗುಪ್ತಚರ ಇಲಾಖೆ ಮತ್ತು ಗಂಭೀರ ವಂಚನೆ ತನಿಖಾ ಕಚೇರಿ ಸೇರಿದಂತೆ ಹೆಚ್ಚಿನ ತನಿಖಾ ಸಂಸ್ಥೆಗಳು ತಮ್ಮ ಕಚೇರಿಗಳಲ್ಲಿ ವಿಚಾರಣೆ ನಡೆಸುತ್ತಿವೆ ಎಂದು ಹೇಳಿದೆ. ಅಂತಹ ವಿಚಾರಣೆ ನಡೆಯುವ ಮತ್ತು ಆರೋಪಿಗಳನ್ನು ಇರಿಸಲಾಗಿರುವ ಎಲ್ಲಾ ಕಚೇರಿಗಳಲ್ಲಿ ಸಿಸಿಟಿವಿಗಳನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಕೋರ್ಟ್ ಹೇಳಿದೆ.
ಸಿಸಿಟಿವಿ ವ್ಯವಸ್ಥೆಗಳು ರಾತ್ರಿಯಲ್ಲೂ ನೋಡಬಹುದಾದ ಸಾಧನಗಳನ್ನು ಹೊಂದಿರಬೇಕು. ಆಡಿಯೋ ಮತ್ತು ವಿಡಿಯೋ ಫುಟೇಜ್ ಹೊಂದಿರಬೇಕು. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕನಿಷ್ಠ ಒಂದು ವರ್ಷದವರೆಗೂ ಮಾಹಿತಿಯನ್ನು ಸಂಗ್ರಹಿಸಿಡಬಲ್ಲ ಸಿಸಿಟಿವಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಖರೀದಿಸಬೇಕು ಎಂದು ತಿಳಿಸಿದೆ.
ಸಿಬಿಐ, ಇಡಿ ಮತ್ತು ಇತರ ತನಿಖಾ ಸಂಸ್ಥೆಗಳಿಂದ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆಯಾದರೆ, ವಿಚಾರಣೆ ನಡೆಸಿದ ವೇಳೆಯಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಪ್ರತಿ ಪಡೆಯಲು ಸಂತ್ರಸ್ತರಿಗೆ ಹಕ್ಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.