ನವದೆಹಲಿ: ತಿಂಗಳಿಗೊಂದು ಬಾರಿಯಂತೆ ಮೂರು ತಿಂಗಳು ತಲಾಖ್ ಉಚ್ಛರಿಸುವ ಮೂಲಕ ತನ್ನ ಹೆಂಡಿತಿಗೆ ವಿಚ್ಛೇದನ ನೀಡಬಹುದಾದ ತಲಾಖ್-ಇ-ಹಸನ್ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೋಮವಾರ ಮತ್ತೊಮ್ಮೆ ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ಬಿ.ವಿ ನಾಗರತ್ನ ಅವರ ರಜಾಕಾಲದ ಪೀಠವು ಈ ವಿಷಯವನ್ನು ರಿಜಿಸ್ಟ್ರಾರ್ ಮುಂದೆ ನಮೂದಿಸುವಂತೆ ಅರ್ಜಿದಾರರಿಗೆ ತಿಳಿಸಿದೆ.
ಅರ್ಜಿದಾರ ಪತ್ರಕರ್ತೆ ಬೆನಜೀರ್ ಹೀನಾ ಪರ ವಾದ ಮಂಡಿಸಿದ ಹಿರಿಯ ವಕೀಲ ಪಿಂಕಿ ಆನಂದ್, ತಲಾಖ್-ಇ -ಹಸನ್ ಪದ್ಧತಿಯನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ತುರ್ತು ವಿಚಾರಣೆಗೆ ಪ್ರಸ್ತಾಪಿಸಿ, ಮಹಿಳೆಗೆ ಎರಡು ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಮೇ 2 ರಂದು ಅರ್ಜಿ ಸಲ್ಲಿಸಲಾಗಿದ್ದು, ಮಹಿಳೆಗೆ ಎರಡು ಬಾರಿ ವಿಚ್ಛೇದನದ ನೋಟಿಸ್ ನೀಡಲಾಗಿದೆ. ಮಹಿಳೆಗೆ ಮಗು ಇದೆ. ಮೊದಲ ನೋಟಿಸ್ ಏಪ್ರಿಲ್ 19 ರಂದು ಮತ್ತು ಕೊನೆಯ ನೋಟಿಸ್ ಮೇ 19 ರಂದು ಕಳುಹಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಉಲ್ಲೇಖಿಸಿರುವ ರಿಜಿಸ್ಟ್ರಾರ್ ಅವರನ್ನು ಸಂಪರ್ಕಿಸಿ, ಮನವಿ ಮಾಡಲು ಆನಂದ್ ಅವರಿಗೆ ಪೀಠ ಹೇಳಿದ್ದು, ಒಂದು ವೇಳೆ ಅವರು ಕೇಳದಿದ್ದರೆ ನಮ್ಮ ಬಳಿಗೆ ಬನ್ನಿ ಎಂದಿದೆ. ಈ ವಿಷಯವನ್ನು ಕಳೆದ ವಾರವೂ ತುರ್ತು ವಿಚಾರಣೆಗೆ ಉಲ್ಲೇಖಿಸಲಾಗಿತ್ತು. ಆದರೆ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಈ ವಾರ ಮತ್ತೆ ಪ್ರಸ್ತಾಪಿಸಲು ವಕೀಲರಿಗೆ ಹೇಳಿತ್ತು.
ತಲಾಖ್-ಇ-ಹಸನ್ ಮತ್ತು ಇತರ ಎಲ್ಲಾ ರೀತಿಯ ಏಕಪಕ್ಷೀಯ ಹೆಚ್ಚುವರಿ ನ್ಯಾಯಾಂಗ ತಲಾಖ್ ಅನ್ನು ಅಸಾಂವಿಧಾನಿಕ ಎಂದು ಘೋಷಿಸಲು ಮತ್ತು ಎಲ್ಲರಿಗೂ ಏಕರೂಪದ ವಿಚ್ಛೇದನ ಪ್ರಕ್ರಿಯೆ ಮಾರ್ಗಸೂಚಿಗಳನ್ನು ರೂಪಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಏನಿದು ಈ ತಲಾಖ್ ಇ ಹಸನ್?: ತಲಾಖ್-ಇ-ಹಸನ್‌ನಲ್ಲಿ ತಲಾಕ್ ಅನ್ನು ತಿಂಗಳಿಗೊಮ್ಮೆ, ಮೂರು ತಿಂಗಳ ಅವಧಿಯಲ್ಲಿ ಉಚ್ಚರಿಸಲಾಗುತ್ತದೆ. ಮೂರು ತಲಾಖ್ ಆಗುವುದರೊಳಗೆ ಪತಿ ಪತ್ನಿಯ ನಡುವೆ ಸರಿಹೊಂದದೇ ಇದ್ದರೆ ಮೂರನೇ ತಿಂಗಳಲ್ಲಿ ಮೂರನೇ ಉಚ್ಚಾರಣೆಯ ನಂತರ ವಿಚ್ಛೇದನವನ್ನು ಔಪಚಾರಿಕಗೊಳಿಸಲಾಗುತ್ತದೆ. ಒಂದು ವೇಳೆ ತಲಾಖ್‌ನ ಮೊದಲ ಅಥವಾ ಎರಡನೆಯ ಉಚ್ಚಾರಣೆಯ ನಂತರ ಸಹಬಾಳ್ವೆ ಪುನರಾರಂಭವಾದರೆ, ಇಬ್ಬರೂ ರಾಜಿ ಮಾಡಿಕೊಂಡಿದ್ದಾರೆ ಎಂದು ಭಾವಿಸಿ, ತಲಾಖ್‌ನ ಮೊದಲ ಮತ್ತು ಎರಡನೆಯ ಉಚ್ಚಾರಣೆ ಅಮಾನ್ಯವೆಂದು ಪರಿಗಣಿಸಲಾಗುತ್ತದೆ.
ತಲಾಖ್-ಇ-ಹಸನ್ ಮತ್ತು ಇತರ ಎಲ್ಲಾ ರೀತಿಯ ಏಕಪಕ್ಷೀಯ ಹೆಚ್ಚುವರಿ ನ್ಯಾಯಾಂಗ ತಲಾಖ್ ಆಚರಣೆಯು ಮಾನವ ಹಕ್ಕುಗಳು ಮತ್ತು ಲಿಂಗ ಸಮಾನತೆಯ ಆಧುನಿಕ ತತ್ವಗಳೊಂದಿಗೆ ಸಾಮರಸ್ಯ ಹೊಂದಿಲ್ಲ ಮತ್ತು ಇಸ್ಲಾಮಿಕ್ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಲಾಗಿದೆ.
ಪತ್ರಕರ್ತೆ ಸಲ್ಲಿಸಿದ ಮನವಿಯಲ್ಲಿ ಅನೇಕ ಇಸ್ಲಾಮಿಕ್ ರಾಷ್ಟ್ರಗಳು ಇಂತಹ ಆಚರಣೆಗಳನ್ನು ನಿರ್ಬಂಧಿಸಿವೆ. ಆದರೆ, ಇದು ಭಾರತದಲ್ಲಿ ಜಾರಿಯಲ್ಲಿದೆ. ಈ ಆಚರಣೆ ಅನೇಕ ಮಹಿಳೆಯರು ಮತ್ತು ಅವರ ಮಕ್ಕಳ, ವಿಶೇಷವಾಗಿ ಸಮಾಜದ ದುರ್ಬಲ ಆರ್ಥಿಕ ವರ್ಗಗಳಿಗೆ ಸೇರಿದವರ ಜೀವನದ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುತ್ತದೆ. ಹಾಗಾಗಿ ತಲಾಖ್-ಇ-ಹಸನ್ ಮತ್ತು ಇತರ ಎಲ್ಲಾ ರೀತಿಯ ಏಕಪಕ್ಷೀಯ ಹೆಚ್ಚುವರಿ ನ್ಯಾಯಾಂಗ ತಲಾಖ್ ಅನ್ನು ಅನೂರ್ಜಿತ ಮತ್ತು ಅಸಂವಿಧಾನಿಕ ಎಂದು ಘೋಷಿಸಬೇಕು ಎಂದು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ದೈಹಿಕ ಹಿಂಸೆಯ ಕಾರಣದ ಆಧಾರದ ಮೇಲೆ ಅರ್ಜಿ: ಅರ್ಜಿದಾರರು ಪತ್ರಕರ್ತೆ ಬೆನಜೀರ್ ಹೀನಾ ಮುಸ್ಲಿಂ ಪದ್ಧತಿಯಂತೆ ಮದುವೆಯಾಗಿದ್ದಾರೆ. ಅವರಿಗೊಂದು ಮಗು ಕೂಡ ಇದೆ. ಹೆತ್ತವರಿಗೆ ವರದಕ್ಷಿಣೆ ನೀಡುವಂತೆ ಒತ್ತಾಯಿಸಿದ್ದು, ನೀಡದೇ ಇದ್ದಾಗ ಆಕೆಗೆ ಚಿತ್ರಹಿಂಸೆ ನೀಡಿದ್ದಾರೆ. ಮದುವೆಯ ನಂತರ ಮಾತ್ರವಲ್ಲದೇ ಗರ್ಭಾವಸ್ಥೆಯಲ್ಲಿಯೂ ತನ್ನ ಪತಿ ಮತ್ತು ಅವನ ಕುಟುಂಬ ಸದಸ್ಯರು ದೈಹಿಕವಾಗಿ-ಮಾನಸಿಕವಾಗಿ ಹಿಂಸಿಸಿದ್ದು, ಇದರಿಂದ ನಾನು ತೀವ್ರ ಅಸ್ವಸ್ಥಳಾಗಿದ್ದೆ ಎಂದು ಅರ್ಜಿದಾರರು ದೂರಿದ್ದರು.
ಸಂವಿಧಾನದ 14, 15 ನೇ ವಿಧಿಗಳ ಉಲ್ಲಂಘನೆ ವಾದ: ಅರ್ಜಿದಾರರ ತಂದೆ ವರದಕ್ಷಿಣೆ ನೀಡಲು ನಿರಾಕರಿಸಿದಾಗ ಆಕೆಯ ಪತಿ ವಕೀಲರ ಮೂಲಕ ಏಕಪಕ್ಷೀಯ ಹೆಚ್ಚುವರಿ ನ್ಯಾಯಾಂಗ ತಲಾಖ್-ಇ-ಹಸನ್ ನೀಡಿದ್ದರು. ಇದು ಸಂಪೂರ್ಣವಾಗಿ ಸಂವಿಧಾನದ 14, 15, 21, 25 ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರ ವಕೀಲರು ತಮ್ಮ ಅರ್ಜಿಯಲ್ಲಿ ಹೇಳಿದ್ದರು.
ಇದನ್ನೂ ಓದಿ: ಜ್ಞಾನವಾಪಿ ವಿವಾದ: ಮಸೀದಿ ಸಮಿತಿ ಅರ್ಜಿ ವಿಚಾರಣೆ ಜುಲೈ 4ಕ್ಕೆ ಮುಂದೂಡಿಕೆ