ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಕೊಲಿಜಿಯಂ, ನ್ಯಾಯಮೂರ್ತಿಗಳಾದ ಅನಂತ ರಾಮನಾಥ್ ಹೆಗ್ಡೆ ಮತ್ತು ಕನ್ನಂಕುಝಿಲ್ ಶ್ರೀಧರನ್ ಹೇಮಲೇಖಾ ಅವರನ್ನು ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಿಸುವಂತೆ ಶಿಫಾರಸು ಮಾಡಿದೆ. ಆದಾಗ್ಯೂ, ನ್ಯಾಯಮೂರ್ತಿ ಸಿದ್ದಯ್ಯ ರಾಚಯ್ಯ ಅವರನ್ನು ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡುವ ಬದಲು ನವೆಂಬರ್ 8, 2024 ರವರೆಗೆ ಒಂದು ವರ್ಷದ ಅವಧಿಗೆ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿದೆ.
ಮೇ 30 ರಂದು, ಕೊಲಿಜಿಯಂ ಕರ್ನಾಟಕ ಹೈಕೋರ್ಟ್‌ನ ಮೂವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರ್ವಾನುಮತದಿಂದ ಶಿಫಾರಸು ಮಾಡಿದೆ. ಮೆಮೊರಾಂಡಮ್ ಆಫ್ ಪ್ರೊಸೀಜರ್ ವಿಷಯದಲ್ಲಿ ಕರ್ನಾಟಕ ಹೈಕೋರ್ಟ್‌ನ ವ್ಯವಹಾರಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಕೊಲಿಜಿಯಂ ಸಮಾಲೋಚಿಸಿ ಈ ಶಿಫಾರಸು ಮಾಡಿದೆ.
ಕರ್ನಾಟಕ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕಗೊಳ್ಳಲು ಈ ಹೆಚ್ಚುವರಿ ನ್ಯಾಯಮೂರ್ತಿಗಳ ಅರ್ಹತೆ ಮತ್ತು ಸೂಕ್ತತೆಯನ್ನು ನಿರ್ಣಯಿಸಲು ಇರಿಸಲಾದ ದಾಖಲೆಗಳನ್ನ ಪರಿಶೀಲಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕೊಲಿಜಿಯಂ ಹೇಳಿದೆ. ವಿಷಯದ ಎಲ್ಲಾ ಅಂಶಗಳನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಅನಂತ್ ರಾಮನಾಥ್ ಹೆಗಡೆ ಮತ್ತು ಕನ್ನಂಕುಝಿಲ್ ಶ್ರೀಧರನ್ ಹೇಮಲೇಖಾ ಅವರನ್ನು ಖಾಯಂ ನ್ಯಾಯಮೂರ್ತಿಗಳಾಗಿ ಹಾಗೂ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸಿದ್ದಯ್ಯ ರಾಚಯ್ಯ ಅವರನ್ನು ನೇಮಿಸಲು ಶಿಫಾರಸು ಮಾಡಲು ಕೊಲಿಜಿಯಂ ನಿರ್ಧಾರ ಕೈಗೊಂಡಿದೆ.
ಮೇಲ್ಕಂಡ ಶಿಫಾರಸಿಗೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ರಾಜ್ಯಪಾಲರು ಸಮ್ಮತಿಸಿದ್ದಾರೆ ಎಂದು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.
ಮದ್ರಾಸ್ ಹೈಕೋರ್ಟ್ಗೆ ಐವರು ಖಾಯಂ ನ್ಯಾಯಮೂರ್ತಿಗಳ ನೇಮಕ ಶಿಫಾರಸು: ಇದೇ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ ನೇತೃತ್ವದ ಕೊಲಿಜಿಯಂ ಐವರು ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಮದ್ರಾಸ್ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳನ್ನು ನೇಮಿಸಲು ಶಿಫಾರಸು ಮಾಡಿದೆ. ನ್ಯಾಯಮೂರ್ತಿಗಳಾದ ಎ.ಎ. ನಕ್ಕೀರನ್, ನಿಡುಮೋಳು ಮಾಳ, ಎಸ್. ಸೌಂತರ್, ಸುಂದರ್ ಮೋಹನ್, ಮತ್ತು ಕಬಾಲಿ ಕುಮರೇಶ್ ಬಾಬು ಅವರನ್ನು ಮದ್ರಾಸ್ ಹೈಕೋರ್ಟ್‌ನ ಖಾಯಂ ನ್ಯಾಯಮೂರ್ತಿಗಳನ್ನಾಗಿ ನೇಮಿಸಲಾಗಿದೆ.
ಜೂನ್ 20 ರಂದು, ಮದ್ರಾಸ್ ಹೈಕೋರ್ಟ್‌ನ ಕೊಲಿಜಿಯಂ ಈ ಐವರು ಹೆಚ್ಚುವರಿ ನ್ಯಾಯಾಧೀಶರ ಹೆಸರನ್ನು ಉಚ್ಚ ನ್ಯಾಯಾಲಯದಲ್ಲಿ ಖಾಯಂ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಸರ್ವಾನುಮತದಿಂದ ಶಿಫಾರಸು ಮಾಡಿತ್ತು.(ಐಎಎನ್ಎಸ್)