ನವದೆಹಲಿ: ಕೇರಳದಲ್ಲಿ 'ಮರ್ಯಾದಾ ಹತ್ಯೆ‘ ಪ್ರಕರಣವೊಂದರ ಆರೋಪಿಗೆ ರಾಜಸ್ಥಾನ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು ಈ ಕುರಿತ ಅರ್ಜಿ ವಿಚಾರಣೆ ನಡೆಸಿ, ಪ್ರಕರಣದ ಆರೋಪಿ ರಾಜಸ್ಥಾನ ಮೂಲದ ಮುಖೇಶ್ ಚೌಧರಿಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಸೂಚಿಸಿದೆ.
ರಾಜಸ್ಥಾನದ ಜೈಪುರದ ಯುವತಿ ಮಮತಾ, ಕೇರಳದ ಯುವಕ ಅಮಿತ್ ನಾಯರ್ ಅವರನ್ನು 2015ರಲ್ಲಿ ವಿವಾಹವಾಗಿದ್ದರು. ಪೋಷಕರ ಆಶಯಕ್ಕೆ ವಿರುದ್ಧವಾಗಿ ಅನ್ಯಜಾತಿಯ ಹುಡುಗನನ್ನು ವಿವಾಹವಾಗಿದ್ದಾಳೆ ಎಂಬ ಕಾರಣಕ್ಕೆ ಮಮತಾಳ ಸಹೋದರ ಮುಖೇಶ್ ಚೌಧರಿ, ಅಮಿತ್ ನಾಯರ್‌ನನ್ನು 2017ರಲ್ಲಿ ಗುಂಡಿಕ್ಕಿ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮುಖೇಶ್ ಚೌಧರಿಗೆ ರಾಜಸ್ಥಾನ ಹೈಕೋರ್ಟ್ ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ, ಆತನ ಸಹೋದರಿ ಮಮತಾ ನಾಯರ್, ಸುಪ್ರೀಂಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.