ನವದೆಹಲಿ: ಕೋವಿಡ್ ನಿರ್ವಹಣೆಯಲ್ಲಿ ಮನುಷ್ಯರ ಮೇಲೆ ಸಿಂಪಡಿಸುವ ಸೋಂಕು ನಿವಾರಕಗಳು ಮತ್ತು ನೇರಳಾತೀತ ಕಿರಣಗಳ ಬಳಕೆಯನ್ನು ನಿಷೇಧಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.
ಸೋಂಕು ನಿವಾರಕ ಸುರಂಗಗಳ ನಿಷೇಧಿಸುವ ಕುರಿತು ನಿರ್ದೇಶನಗಳನ್ನು ನೀಡುವಂತೆ ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ನ್ಯಾಯಪೀಠವು ಕೇಂದ್ರಕ್ಕೆ ತಿಳಿಸಿದೆ.
ಸೋಂಕು ನಿವಾರಣೆಗಾಗಿ ಮಾನವರ ಮೇಲೆ ಸೋಂಕು ನಿವಾರಕ ಸುರಂಗಗಳಲ್ಲಿ ರಾಸಾಯನಿಕ ಹಾಗೂ ನೇರಳಾತೀತ ಕಿರಣ ಹರಿಸಲಾಗುತ್ತದೆ. ದೈಹಿಕವಾಗಿ ಮತ್ತು ಮಾನಸಿಕವಾಗಿ ಹಾನಿಕಾರಕ ಎಂಬುದು ತಿಳಿದಿದ್ದರೂ ಇದರ ಬಳಕೆ ನಿಲ್ಲಿಸಿಲ್ಲ. ಈ ಬಗ್ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸೆಪ್ಟೆಂಬರ್ 7ರಂದು ಇನ್ನೂ ಯಾಕೆ ಸುರಂಗಗಳನ್ನು ನಿಷೇಧಿಸಿಲ್ಲ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು.
ಈ ಕುರಿತು ಆರೋಗ್ಯ ಸಚಿವಾಲಯ ಯಾವುದೇ ಸಲಹೆ ಅಥವಾ ಮಾರ್ಗಸೂಚಿ ನೀಡಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದರು. ಇಂದು ಮತ್ತೆ ವಿಚಾರಣೆ ನಡೆಸಿರುವ ಕೋರ್ಟ್, ಈ ಸುರಂಗಗಳ ಸ್ಥಾಪನೆ ಮತ್ತು ಜಾಹೀರಾತನ್ನು ತಕ್ಷಣವೇ ಬ್ಯಾನ್ ಮಾಡುವಂತೆ ಕೇಂದ್ರಕ್ಕೆ ನಿರ್ದೇಶಿಸಿದೆ.