ನವದೆಹಲಿ: ಮಾಜಿ ಸಚಿವ ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಗಾಲಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಭೇಟಿ ನೀಡಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಅವರ ಮಗಳನ್ನು ಭೇಟಿ ಮಾಡಲು ಹಾಗೂ ಬಳ್ಳಾರಿಯಲ್ಲಿ ನವೆಂಬರ್ 6 ರವರೆಗೆ ಇರಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ವಿಚಾರಣೆ ಮುಗಿಯುವವರೆಗೂ ಬಳ್ಳಾರಿಯಿಂದ ದೂರ ಇರಿ: ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರ ಪೀಠವು ವಿಶೇಷ ನ್ಯಾಯಾಲಯಕ್ಕೆ ನಿತ್ಯ ವಿಚಾರಣೆ ನಡೆಸುವಂತೆ ಮತ್ತು ನವೆಂಬರ್ 9, 2022 ರಿಂದ ಆರು ತಿಂಗಳೊಳಗೆ ಸಂಪೂರ್ಣ ಪ್ರಕರಣದ ವಿಚಾರಣೆ ಪೂರ್ಣಗೊಳಿಸಲು ನಿರ್ದೇಶಿಸಿತ್ತು. ವಿಚಾರಣೆ ಪೂರ್ಣಗೊಳ್ಳುವವರೆಗೆ ಬಳ್ಳಾರಿಯಿಂದ ಹೊರಗುಳಿಯುವಂತೆಯೂ ರೆಡ್ಡಿಗೆ ಇದೇ ವೇಳೆ ಸುಪ್ರೀಂಕೋರ್ಟ್ ಸೂಚಿಸಿದೆ.
ವಿಚಾರಣೆಗೆ ಅಡ್ಡಿ ಪಡಿಸಿದರೆ ಕಠಿಣ ಕ್ರಮ: ಇದೇ ವೇಳೆ ವಿಚಾರಣೆ ವಿಳಂಬಗೊಳಿಸುವ ಯಾವುದೇ ಪ್ರಯತ್ನ ಮಾಡದಂತೆ ರೆಡ್ಡಿಗೆ ಸೂಚಿಸಿರುವ ಸುಪ್ರೀಂ ಒಂದೊಮ್ಮೆ ಅಂತ ಪ್ರಯತ್ನ ಮಾಡಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಕೋರ್ಟ್ ಹೇಳಿದೆ. ಬಹುಕೋಟಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಆರೋಪಿಯಾಗಿರುವ ರೆಡ್ಡಿ 2015ರಿಂದ ಜಾಮೀನಿನ ಮೇಲೆ ಹೊರಗಿದ್ದು, ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಮತ್ತು ಕಡಪಕ್ಕೆ ಭೇಟಿ ನೀಡದಂತೆ ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹಲವು ಷರತ್ತುಗಳನ್ನು ವಿಧಿಸಿದೆ.
ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಗಳನ್ನು ಭೇಟಿ ಮಾಡಲು ಬಳ್ಳಾರಿಗೆ ಭೇಟಿ ನೀಡಲು ರೆಡ್ಡಿ ಅನುಮತಿ ಕೋರಿದ್ದರು. ರೆಡ್ಡಿ ಮತ್ತು ಅವರ ಸೋದರ ಮಾವ ಓಬಳಾಪುರಂ ಮೈನಿಂಗ್ ಕಂಪನಿ (ಒಎಂಸಿ) ವ್ಯವಸ್ಥಾಪಕ ನಿರ್ದೇಶಕ ಬಿ ವಿ ಶ್ರೀನಿವಾಸ್ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5, 2011 ರಂದು ಬಳ್ಳಾರಿಯಿಂದ ಬಂಧಿಸಿ ಹೈದರಾಬಾದ್‌ಗೆ ಕರೆ ತಂದಿತ್ತು.
ಗಡಿ ಬದಲಿಸಿದ ಗುರುತರ ಆರೋಪ: ಕರ್ನಾಟಕದ ಬಳ್ಳಾರಿ ಮತ್ತು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಇರುವ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಗುತ್ತಿಗೆ ಗಡಿ ಗುರುತುಗಳನ್ನು ಬದಲಾಯಿಸುವುದು ಮತ್ತು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಆರೋಪವನ್ನು ಕಂಪನಿಯು ಎದುರಿಸುತ್ತಿದೆ.
ಕೆಲ ಷರತ್ತು ವಿಧಿಸಿದ್ದ ಕೋರ್ಟ್: ಜಾಮೀನು ನೀಡುವಾಗ, ಪಾಸ್‌ಪೋರ್ಟ್ ಅನ್ನು ಸಂಬಂಧಪಟ್ಟ ವಿಚಾರಣಾ ನ್ಯಾಯಾಲಯದ ಮುಂದೆ ಒಪ್ಪಿಸುವಂತೆ ಮತ್ತು ವಿಚಾರಣಾ ನ್ಯಾಯಾಧೀಶರ ಅನುಮತಿಯಿಲ್ಲದೇ ದೇಶವನ್ನು ತೊರೆಯದಂತೆ ಸುಪ್ರೀಂ ಕೋರ್ಟ್ ಜನಾರ್ದನ ರೆಡ್ಡಿ ಅವರಿಗೆ ಸೂಚಿಸಿತ್ತು.
ಇದನ್ನೂ ಓದಿ: 4G ಯಿಂದ 5Gಗೆ ಅಪ್ಡೇಟ್ ಮಾಡ್ತೀವಿ ಎಂದು ನಿಮ್ಮ ಖಾತೆಗೆ ಕನ್ನ ಹಾಕಬಹುದು ಹುಷಾರ್