ನವದೆಹಲಿ: ಜ್ಞಾನವಾಪಿ ಮಸೀದಿಯೋ ಮಂದಿರವೋ ಎಂಬ ಜಿಜ್ಞಾಸೆಯ ಮಧ್ಯೆ ನಿರ್ಬಂಧಿತ ಪ್ರದೇಶದಲ್ಲಿರುವ ಶಿವಲಿಂಗವಿರುವ ನೀರಿನ ತೊಟ್ಟಿಯನ್ನು ಸ್ವಚ್ಛಗೊಳಿಸಲು ಸುಪ್ರೀಂಕೋರ್ಟ್ ಮಂಗಳವಾರ ಅವಕಾಶ ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠವು ಹಿಂದು ಪಕ್ಷಗಾರರು ಸಲ್ಲಿಸಿದ ಮನವಿಯನ್ನು ಅಂಗೀಕರಿಸಿತು.
ಸುಪ್ರೀಂಕೋರ್ಟ್ನಲ್ಲಿ ಜ್ಞಾನವಾಪಿ ಕೇಸ್ ಚಾಲ್ತಿಯಲ್ಲಿದ್ದು, ಅದು ಮಂದಿರವೋ ಅಥವಾ ಮಸೀದಿಯೋ ಎಂಬುದನ್ನು ನಿರ್ಣಯಿಸಲು ಪುರಾತತ್ವ ಇಲಾಖೆ ಈಗಾಗಲೇ ಸಮೀಕ್ಷೆ ನಡೆಸಿ ವರದಿ ಸಲ್ಲಿಸಿದೆ. ಅಲ್ಲಿನ ಆವರಣವನ್ನು ಸದ್ಯಕ್ಕೆ ನಿರ್ಬಂಧಿಸಲಾಗಿದೆ. ಇದರಿಂದ ಕಸ, ಕಡ್ಡಿ ಬಿದ್ದು ಪ್ರದೇಶ ಹಾಳು ಬಿದ್ದಿದೆ.
ಹಲವು ತಿಂಗಳಿನಿಂದ ಈ ಪ್ರದೇಶದಲ್ಲಿ ಜನಸಂಚಾರವನ್ನು ನಿಷೇಧಿಸಿದ್ದರಿಂದ ನೀರಿನ ತೊಟ್ಟಿ ಕಸ ತುಂಬಿಕೊಂಡಿದೆ. ಇದರಲ್ಲಿರುವ ಶಿವಲಿಂಗಕ್ಕೆ ಅಪಮಾನವಾಗಿದೆ. ಹೀಗಾಗಿ ಸೀಲ್ ಮಾಡಲಾದ ಪ್ರದೇಶವನ್ನು ಸ್ವಚ್ಛ ಮಾಡಲು ಅವಕಾಶ ನೀಡಬೇಕು ಎಂದು ಕೋರಿ ಹಿಂದು ಮಹಿಳೆಯರು 2023 ರ ಡಿಸೆಂಬರ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಂದು ಮನವಿಯ ವಿಚಾರಣೆ ನಡೆಸಿದ ಕೋರ್ಟ್, ವಾರಾಣಸಿ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಸ್ವಚ್ಛತಾ ಪ್ರಕ್ರಿಯೆ ನಡೆಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠ ಹೇಳಿತು. ಇದಕ್ಕೆ ಮುಸ್ಲಿಂ ಪಕ್ಷಗಾರರು ಕೂಡ ಒಪ್ಪಿಗೆ ಸೂಚಿಸಿತು.
ಕೋರ್ಟ್‌ನಲ್ಲಿ ಏನಾಯ್ತು?: ಹಿಂದೂ ಅರ್ಜಿದಾರರ ಪರ ವಾದ ಮಂಡಿಸಿದ ವಕೀಲರು, ಶಿವಲಿಂಗದ ಮಹತ್ವದ ಬಗ್ಗೆ ಹೇಳಿದರು. ಇದು ಹಿಂದೂಗಳಿಗೆ ಪವಿತ್ರವಾಗಿದೆ. ಹಲವು ದಿನಗಳಿಂದ ಶಿವಲಿಂಗ ಕೊಳಕಾಗಿದೆ. ಕಸ, ಕಡ್ಡಿಯಿಂದ ತುಂಬಿಕೊಂಡಿದೆ. ನೀರಿನ ತೊಟ್ಟಿಯಲ್ಲಿ ಮೀನುಗಳು ಮೃತಪಟ್ಟಿವೆ. ಇದರಿಂದ ಆ ಪ್ರದೇಶ ಕೆಟ್ಟ ವಾಸನೆ ಬೀರುತ್ತಿದೆ. ಇದು ಶಿವನ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ. ಹೀಗಾಗಿ ಸ್ವಚ್ಛತೆಗೆ ಅವಕಾಶ ಮಾಡಿಕೊಡಬೇಕು ಎಂದು ಕೋರಿದರು.
ಸಿವಿಲ್ ನ್ಯಾಯಾಧೀಶರು ನೇಮಿಸಿದ ಅಡ್ವೊಕೇಟ್ ಕಮಿಷನರ್‌ಗಳು, ಸಮೀಕ್ಷೆಯ ಸಮಯದಲ್ಲಿ ಮುಸ್ಲಿಂ ಸಮುದಾಯ ಬಳಸುತ್ತಿದ್ದ ವಾಜುಖಾನ (ನೀರಿನ ತೊಟ್ಟಿ)ದಲ್ಲಿ ಶಿವಲಿಂಗ ಇರುವುದನ್ನು ಪತ್ತೆ ಮಾಡಿದರು. ಪವಿತ್ರ ಶಿವಲಿಂಗ ಈಗ ಮಲಿನವಾಗಿದೆ. ಶುದ್ಧೀಕರಣ ಮಾಡಲೇಬೇಕಿದೆ. ಪ್ರಕರಣವು ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ, ಶುಚಿತ್ವಕ್ಕೆ ಅವಕಾಶ ನೀಡಬಹುದಿತ್ತು ಎಂದು ಹಿಂದೂ ಪರ ವಕೀಲ ವಿಷ್ಣು ಶಂಕರ್ ಜೈನ್ ಹೇಳಿದರು.
ಇನ್ನೂ, ಶಿವಲಿಂಗ ಇರುವ ನೀರಿನ ತೊಟ್ಟಿಯನ್ನು ಶುಚಿ ಮಾಡಲು ಹಿಂದೂಗಳು ಕೋರಿದ ಮನವಿಯನ್ನು ಮುಸ್ಲಿಂ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ. ಅವರ ಪರ ವಕೀಲರು ಕೋರ್ಟ್ಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಮಸೀದಿಯಲ್ಲಿ ಶಿವಲಿಂಗವಿದೆ ಇದು ಕಾಶಿ ವಿಶ್ವನಾಥನಿಗೆ ಸೇರಿದ ಜಾಗ ಎಂಬ ವಾದದ ಬಳಿಕ 2022 ರ ಮೇ 16 ರಂದು ವಾರಾಣಸಿಯ ಜಿಲ್ಲಾ ಕೋರ್ಟ್, ಜ್ಞಾನವಾಪಿಯಲ್ಲಿನ ನೀರಿನ ತೊಟ್ಟಿ, ಅದರ ಸುತ್ತಮುತ್ತಲಿನ ಪ್ರದೇಶವನ್ನು ಮುಚ್ಚಲಾಯಿತು. ಇದನ್ನು ಸುಪ್ರೀಂ ಕೋರ್ಟ್ ಕೂಡ ಮೇ 20 ರಂದು ಅಂಗೀಕರಿಸಿತ್ತು.
ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಪ್ರಕರಣ: ಶಿವಲಿಂಗಕ್ಕೆ ಜಲಾಭಿಷೇಕ ಮಾಡಲು ಬಂದ ಹಿಂದೂ ಸಂತ; ಪೊಲೀಸರಿಂದ ತಡೆ