ನವದೆಹಲಿ: ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ಗುತ್ತಿಗೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದನ್ನು ಪ್ರಶ್ನಿಸಿ ಲೋಕಾಯುಕ್ತ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿ ಸೂಚಿಸಿದೆ.
ಕೋರ್ಟ್ನಲ್ಲಿ ಏನೇನಾಯ್ತು?: ಬಿಜೆಪಿ ಶಾಸಕರ ವಿರುದ್ಧ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಬೇಕು. ಇಂದು ಮಧ್ಯಾಹ್ನ 2 ಗಂಟೆಗೆ ನಡೆಸಿ ಎಂದು ಲೋಕಾಯುಕ್ತ ವಕೀಲರು ಮುಖ್ಯ ನ್ಯಾ.ಚಂದ್ರಚೂಡ್ ಪೀಠದ ಮುಂದೆ ಮನವಿ ಮಾಡಿದರು. ಇದನ್ನು ಪ್ರಶ್ನಿಸಿದ ಪೀಠ, ಅಷ್ಟು ತುರ್ತು ಏನಿದೆ?. ಸಾಂವಿಧಾನಿಕ ಪೀಠದ ಮುಂದೆ ಬೇರೆ ಮುಖ್ಯ ಪ್ರಕರಣ ಇರುವ ಕಾರಣ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿತು.
ಆದರೆ, ಲಂಚ ಪ್ರಕರಣ ಗಂಭೀರವಾಗಿದೆ ಎಂದು ವಕೀಲರು ಕೋರ್ಟ್ ಗಮನಕ್ಕೆ ತಂದರು. ತುರ್ತು ಪಟ್ಟಿಗೆ ಸೇರಿಸಲು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಲು ಪೀಠ ಸೂಚಿಸಿತು. ವಕೀಲರು ತಕ್ಷಣ ನ್ಯಾಯಮೂರ್ತಿ ಕೌಲ್ ನೇತೃತ್ವದ ನ್ಯಾಯಾಲಯಕ್ಕೆ ಧಾವಿಸಿ ಅರ್ಜಿಯ ತುರ್ತು ವಿಚಾರಣೆಗೆ ಕೋರಿದರು. ಆದರೆ, ಅರ್ಜಿಯನ್ನು ತುರ್ತಾಗಿ ನಡೆಸುವ ಕಾರಣವೇನು ಎಂದು ಪೀಠ ಮರು ಪ್ರಶ್ನಿಸಿತು. ಆರೋಪಿ ಹಾಲಿ ಶಾಸಕರಾಗಿದ್ದು, ಅವರ ಬಳಿಯಿದ್ದ ಕೋಟ್ಯಂತರ ರೂಪಾಯಿ ಹಣವನ್ನು ವಶಕ್ಕೆ ಪಡೆಯಲಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ ಎಂದು ವಕೀಲರು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.
ವಕೀಲರ ಮನವಿ ಆಲಿಸಿದ ನ್ಯಾಯಮೂರ್ತಿ ಕೌಲ್, ಅರ್ಜಿಯನ್ನು ಸಾಧ್ಯವಾದಷ್ಟು ಬೇಗ ಪಟ್ಟಿ ಮಾಡಲಾಗುವುದು. ಇದು ಜಾಮೀನು ರದ್ದತಿ ವಿಷಯವಾಗಿದ್ದು, ಸೂಕ್ತ ಸಮಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಪ್ರಕರಣವೇನು?: ಚನ್ನಗಿರಿ ಕ್ಷೇತ್ರದ ಶಾಸಕರೂ ಆಗಿರುವ ಮಾಡಾಳ್ ವಿರೂಪಾಕ್ಷಪ್ಪ ಕೆಎಸ್‌ಡಿಎಲ್‌ನ ಅಧ್ಯಕ್ಷರಾಗಿದ್ದರು. ಇದಕ್ಕೆ ಕಚ್ಚಾವಸ್ತುಗಳ ಪೂರೈಕೆಗಾಗಿ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಎದುರಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಇವರ ಪುತ್ರ ಮಾಡಾಳ್ ಪ್ರಶಾಂತ್ ಲಂಚ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಲಂಚದ ಹಣ ಮತ್ತು ಆರೋಪಿಯನ್ನು ಮಾರ್ಚ್ 2ರಂದು ಬಂಧಿಸಿದ್ದರು.
ಇದಾದ ಬಳಿಕ ವಿರೂಪಾಕ್ಷಪ್ಪ ಮತ್ತವರ ಪುತ್ರನ ಬೆಂಗಳೂರಿನ ಕಚೇರಿಗಳು ಹಾಗೂ ಮನೆ ಮತ್ತು ಚನ್ನಗಿರಿಯ ಮನೆಗಳ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ನಗದು ಜಪ್ತಿ ಮಾಡಿ ತನಿಖೆ ಮುಂದುವರೆಸಿದ್ದರು. ಈ ಎಲ್ಲ ಬೆಳವಣಿಗೆಗಳ ಮಧ್ಯೆ ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ರವಾನಿಸಿದ್ದ ಮಾಡಾಳ್ ವಿರೂಪಾಕ್ಷಪ್ಪ ನಿರೀಕ್ಷಣಾ ಜಾಮೀನಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಶಾಸಕರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಆದರೆ, ಪ್ರಕರಣದ ವಿಚಾರಣೆಗೆ ಶಾಸಕರು ಸಹಕರಿಸುತ್ತಿಲ್ಲ ಎಂದು ಆರೋಪಿಸಿರುವ ಲೋಕಾಯುಕ್ತ ಪೊಲೀಸರು ಅವರಿಗೆ ನೀಡಲಾದ ಜಾಮೀನನ್ನು ರದ್ದು ಮಾಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಲೋಕಾ ಮುಂದೆ ಹಾಜರಾದ ಶಾಸಕ ವಿರೂಪಾಕ್ಷಪ್ಪ ಹಾಗೂ ಪುತ್ರ ಪ್ರಶಾಂತ್ ಮಾಡಾಳ್