ಸತಾರಾ (ಮಹಾರಾಷ್ಟ್ರ): ನಾಲ್ಕು ವರ್ಷದಿಂದ ಕಣ್ತಪ್ಪಿಸಿ ಓಡಾಡಿಕೊಂಡಿದ್ದ ಆರೋಪಿಯನ್ನ ಪೊಲೀಸರು ರೈತರ ವೇಷ ಧರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಕ್ಕಲ್ ಅಲಿಯಾಸ್ ಜಕಲ್ಯಾ ರಂಗಾ ಎಂಬಾತ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದ. ಆದರೆ, ಹಲವು ವರ್ಷದಿಂದ ಪೊಲೀಸರು ಆತನನ್ನ ಬಂಧಿಸಲು ಹಲವು ಬಾರಿ ಪ್ರಯತ್ನ ಪಟ್ಟರೂ ಆತ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿದ್ದ. ಆದರೆ, ಪೊಲೀಸರು ಶತಾಯ ಗತಾಯ ಆತನನ್ನು ಬಂಧಿಸಲೇಬೇಕೆಂದು ಗ್ರಾಮದಲ್ಲಿ ಸತತ 5 ದಿನಗಳಿಂದ ರೈತರ ವೇಷ ಧರಿಸಿ ಹೊಲದಲ್ಲಿಯೇ ಆತನನ್ನು ಬಂಧಿಸಿದ್ದಾರೆ.
ಏನಿದು ಘಟನೆ?: ಜಕ್ಕಲ್ ಅಲಿಯಾಸ್ ಜಕಲ್ಯಾ ರಂಗಾ ಎಂಬಾತನ ಮೇಲೆ ಎರಡು ಕೊಲೆ, ಕಳ್ಳತನ, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿರುವುದು ಸೇರಿ ಒಟ್ಟು 16 ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಲಾಗಿದ್ದವು.
ಇಲ್ಲಿನ ಜವಾಲಿ, ಸತಾರಾ, ಖಂಡಾಲಾ ಮತ್ತು ಕೊರೇಗಾಂವ್ ಸೇರಿದಂತೆ 5 ತಾಲೂಕುಗಳ ಪೊಲೀಸರು ಆತನ ಜಾಡು ಹಿಡಿದಿದ್ದರು. ಆದರೆ, ಆತ 4 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಪರಾರಿಯಾದ ಅವಧಿಯಲ್ಲಿ ಆತನ ಅಪರಾಧ ಚಟುವಟಿಕೆಗಳು ನಿಂತಿರಲಿಲ್ಲ. ಪೊಲೀಸರಿಗೆ ಗೊಂದಲ ಮಾಡಲೆಂದೇ ಪದೇಪದೆ ವಾಸಸ್ಥಾನ ಬದಲಿಸುತ್ತಿದ್ದ. ಆದರೆ, ಸತಾರಾದಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸಿದ್ದರು.
ಇದಕ್ಕಾಗಿ ಇನ್ಸ್‌ಪೆಕ್ಟರ್ ಕಿಶೋರ್ ಧುಮಾಲ್ ಅವರ ಮಾರ್ಗದರ್ಶನದಲ್ಲಿ ಸಹಾಯಕ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾದ ರಮೇಶ್ ಗಾರ್ಜೆ, ಆನಂದ್ ಸಿಂಗ್ ಸಾಬಲ್ ಮತ್ತು ಸಿಬ್ಬಂದಿ ಕಾರ್ಯಾಚರಣೆಗಿಳಿದರು. ಸತತ 5 ದಿನಗಳ ಕಾಲ ಕೃಷಿ ಕಾರ್ಮಿಕರ ವೇಷದಲ್ಲಿ ತಂಡವು ಆರೋಪಿ ಜಕ್ಕಲ್ ಅನ್ನು ಹಿಂಬಾಲಿಸಿತ್ತು.
ಇಲ್ಲಿನ ಸತಾರಾ ಬಳಿ ಆತ ಮರದ ಕೆಳಗೆ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಆತನ ಸುತ್ತುವರೆದಿದ್ದರು. ಈ ಸುದ್ದಿ ಆರೋಪಿ ಜಕ್ಕಲ್ ಕಿವಿಗೂ ಬಿದ್ದಿದ್ದು, ಆತನ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದ. ತಕ್ಷಣ ಕಬ್ಬಿನ ಗದ್ದೆಯೊಳಗೆ ನುಗ್ಗಿದ ಆತ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ.
ಆದರೆ, ಪಕ್ಕಾ ಪ್ಲಾನ್ ಮಾಡಿಕೊಂಡಿದ್ದ ಪೊಲೀಸರು ಅದಾಗಲೇ ಕಬ್ಬಿನ ಹೊಲವನ್ನು ಸಂಪೂರ್ಣ ಸುತ್ತುವರೆದಿದ್ದರು. ಸತತ 4 ಗಂಟೆಗಳ ಕಾರ್ಯಾಚರಣೆಯ ಮೂಲಕ ಆತನನ್ನು ಬಂಧಿಸಲಾಯಿತು. ಬಂಧಿತನ ವಿಚಾರಣೆಗೊಳಪಡಿಸಿದಾಗ ಹಲವು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, 5 ಲಕ್ಷ ರೂಪಾಯಿ ನಗದು, ಚಿನ್ನಾಭರಣವನ್ನು ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: 2017ರ ಗುಂಡಿನ ದಾಳಿ ಪ್ರಕರಣ: ಬೋರ್ಸಾದ್ ನ್ಯಾಯಾಲಯಕ್ಕೆ ರವಿ ಪೂಜಾರಿ ಹಾಜರು!