ವಾರಣಾಸಿ(ಉತ್ತರ ಪ್ರದೇಶ): ಗೋಮತಿ ನದಿಯಲ್ಲಿ ಕೋವಿಡ್ ವೈರಸ್ ಕುರುಹುಗಳು ಪತ್ತೆಯಾಗಿವೆ ಎಂದು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಲಖನೌದ ಬಿರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೊ ಸೈನ್ಸ್‌ನ ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಗಂಗಾ ಮತ್ತು ಯಮುನಾ ನದಿಗಳಲ್ಲಿ ಹಲವಾರು ಮೃತದೇಹಗಳು ತೇಲಿಂಬಂದಿದ್ದ ಹಿನ್ನೆಲೆ ಈ ಅಧ್ಯಯನ ನಡೆಸಲಾಗಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯ ಮತ್ತು ಲಕ್ನೋದ ಬಿರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯೊ ಸೈನ್ಸ್‌ನ ಜಂಟಿ ಸಂಶೋಧನೆಯ ನಂತರ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಸಂಶೋಧನೆಯ ಭಾಗವಾಗಿ ವಿಜ್ಞಾನಿಗಳು ಸತತ ನಾಲ್ಕು ವಾರಗಳ ಕಾಲ ವಾರಣಾಸಿಯ ವಿವಿಧ ಸ್ಥಳಗಳಿಂದ ಗಂಗಾ ನೀರಿನ ಮಾದರಿಗಳನ್ನು ಸಂಗ್ರಹಿಸಿದ್ದರು. ಸಂಗ್ರಹಿಸಿದ ನೀರಿನ ಮಾದರಿಗಳನ್ನು ಲಖನೌದ ಬಿರ್ಬಲ್ ಸಾಹ್ನಿ ಇನ್ಸ್ಟಿಟ್ಯೂಟ್ ಆಫ್ ಪ್ಯಾಲಿಯಂಟಾಲಜಿಯ ಡಾ.ನೀರಜ್ ರಾಯ್, ಪ್ರಯೋಗಾಲಯದಲ್ಲಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಿದರು. ಒಂದು ತಿಂಗಳ ಕಾಲ ನಡೆದ ತನಿಖೆಯ ನಂತರ, ಗಂಗಾ ನದಿಯನ್ನು ಕೋವಿಡ್ ಮುಕ್ತ ಎಂದು ಘೋಷಿಸಲಾಗಿದ್ದು, ಗೋಮತಿ ನದಿಯಿಂದ ಸಂಗ್ರಹಿಸಿದ ಮಾದರಿಗಳಲ್ಲಿ ವೈರಸ್‌ನ ಕುರುಹುಗಳು ಕಂಡುಬಂದಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಾ.ನೀರಜ್, ಗಂಗಾ ನದಿಯಲ್ಲಿ ಹಲವಾರು ರೀತಿಯ ಬ್ಯಾಕ್ಟೀರಿಯಾಗಳು ಕಂಡು ಬರುತ್ತವೆ. ಅವು ವೈರಸ್ಗಳನ್ನು ಕೊಲ್ಲುವ ಸಾಮರ್ಥ್ಯ ಹೊಂದಿರುವುದರಿಂದ ಗಂಗೆಯಲ್ಲಿ ಯಾವುದೇ ಕುರುಹುಗಳು ಕಂಡು ಬಂದಿಲ್ಲ ಎಂದರು.
ಇದನ್ನೂ ಓದಿ : ಗಂಗಾ ನದಿಯಲ್ಲಿಲ್ಲ ಕೋವಿಡ್ ವೈರಸ್‌ನ ಕುರುಹು: ವರದಿಯಿಂದ ಬಹಿರಂಗ
ಬಿಎಚ್‌ಯುನ ಪ್ರಾಣಿಶಾಸ್ತ್ರ ವಿಭಾಗದ ಪ್ರೊಫೆಸರ್ ಜ್ಞಾನೇಶ್ವರ್ ಚೌಬೆ ಮಾತನಾಡಿ, ಹರಿಯುವ ನೀರು ಮತ್ತು ನಿಂತಿದ್ದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಗಂಗಾ ನದಿಯಲ್ಲಿ ಶವಗಳು ತೇಲಿಬಂದ ನಂತರ, ಸ್ಥಳೀಯರಲ್ಲಿ ಆತಂಕ ಉಂಟಾಗಿತ್ತು. ಹಾಗಾಗಿ ಈ ಪ್ರಯೋಗ ನಡೆಸಿದೆವು ಎಂದು ಸ್ಪಷ್ಟಪಡಿಸಿದ್ದಾರೆ.