ನರ್ಮದಾ (ಗುಜರಾತ್): ಬ್ರಿಟಿಷರು ಭಾರತವನ್ನು ಚಿಕ್ಕ ಚಿಕ್ಕ ಭಾಗಗಳನ್ನಾಗಿ ವಿಭಜಿಸಲು ಸಂಚು ರೂಪಿಸಿದ್ದರು. ಆದರೆ ಸರ್ದಾರ್ ವಲ್ಲಭಭಾಯಿ ಪಟೇಲರು ಆ ಸಂಚನ್ನು ವಿಫಲಗೊಳಿಸಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್‌ನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ರಾಷ್ಟ್ರೀಯ ಏಕತಾ ದಿನದ ಸಮಾರಂಭ ಉದ್ದೇಶಿಸಿ ಮಾತನಾಡಿದ ಅವರು, ರಾಷ್ಟ್ರೀಯ ಏಕತಾ ದಿನಕ್ಕೆ ವಿಶಿಷ್ಟವಾದ ಮಹತ್ವವಿದೆ. ಇಂದಿನ ರಾಷ್ಟ್ರೀಯ ಏಕತಾ ದಿನವು ಆಜಾದಿ ಕಾ ಅಮೃತ ಮಹೋತ್ಸವದ ದಿನವಾಗಿದೆ ಎಂದರು.
ಕೆವಾಡಿಯಾದಲ್ಲಿರುವ ಸರ್ದಾರ್ ಪಟೇಲರ 182 ಮೀಟರ್ ಎತ್ತರದ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಅಮಿತ್ ಭಾರತವನ್ನು ಒಗ್ಗೂಡಿಸಲು ಪಟೇಲರು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಯಾರೂ ಕೂಡಾ ಭಾರತದ ಏಕತೆ ಮತ್ತು ಸಮಗ್ರತೆಯನ್ನು ಹಾಳು ಮಾಡಲು ಸಾಧ್ಯವಿಲ್ಲ ಎಂದು ಭರವಸೆ ನೀಡಿದ್ದಾರೆ.
ಕೆವಾಡಿಯಾ ಎಂಬುದು ಕೇವಲ ಸ್ಥಳದ ಹೆಸರಲ್ಲ, ಇದು ಒಂದು ಪುಣ್ಯಕ್ಷೇತ್ರವಾಗಿ ಮಾರ್ಪಟ್ಟಿದೆ. ರಾಷ್ಟ್ರೀಯ ಏಕತೆ, ದೇಶಭಕ್ತಿಯ ದೇಗುಲವಾಗಿದೆ. ಸರ್ದಾರ್ ಪಟೇಲ್ ಅವರ ಆಕಾಶದ ಎತ್ತರದ ಪ್ರತಿಮೆಯು ಭಾರತದ ಭವಿಷ್ಯ ಉಜ್ವಲವಾಗಿದೆ ಎಂಬ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ ಎಂದು ಅಮಿತ್ ಶಾ ಹೇಳಿದರು.
ಏಕತಾ ದಿನ: ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನವನ್ನು ಏಕತಾ ದಿನವನ್ನಾಗಿ ಆಚರಣೆ ಮಾಡಲಾಗುತ್ತಿದೆ. ಇಂದು ಪಟೇಲರ 146ನೇ ವರ್ಷದ ಜನ್ಮದಿನವಾಗಿದ್ದು, 2014ರಿಂದ ಏಕತಾ ದಿನವನ್ನಾಗಿ ಇವರ ಜನ್ಮದಿನವನ್ನು ಆಚರಣೆ ಮಾಡಲಾಗುತ್ತಿದೆ. ಕೆವಾಡಿಯಾದಲ್ಲಿರುವ 182 ಮೀಟರ್ ಸರ್ದಾರ ಪಟೇಲರ ಪ್ರತಿಮೆಯನ್ನು 2018ರ ಅಕ್ಟೋಬರ್ನಲ್ಲಿ ಪ್ರಧಾನಿ ಮೋದಿಯವರು ಉದ್ಘಾಟಿಸಿದ್ದರು.
ಇದನ್ನೂ ಓದಿ: ಮುಂದಿನ ವರ್ಷ 5 ಬಿಲಿಯನ್ ಕೋವಿಡ್ ವ್ಯಾಕ್ಸಿನ್ ಉತ್ಪಾದನೆಗೆ ಭಾರತ ಸಿದ್ಧ: ಮೋದಿ